ತೀಸ್ತಾ ಸೆಟಲ್ವಾಡ್ ಅವರ ಎನ್ ಜಿಒ ಲೈಸನ್ಸ್ ರದ್ದು
ಮುಂಬೈ, ಜೂನ್ 16: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಸಭ್ರಂಗ್ ಟ್ರಸ್ಟ್ ಸರ್ಕಾರೇತರ ಸಂಸ್ಥೆ ಲೈಸನ್ಸ್ ರದ್ದುಗೊಳಿಸಿ ಕೇಂದ್ರ ಗೃಹ ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ.ವಿದೇಶಿ ಮೂಲಗಳಿಂದ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿದ ಆರೋಪವನ್ನು ತೀಸ್ತಾ ಅವರು ಎದುರಿಸುತ್ತಿದ್ದಾರೆ.
ಅಕ್ರಮವಾಗಿ ದೇಣಿಗೆ ಸಂಗ್ರಹಿಸಿದ ಆರೋಪದ ಮೇಲೆ ಈ ಹಿಂದೆ ತೀಸ್ತಾ ಅವರ ಮನೆ ಮತ್ತು ಕಚೇರಿ ಮೇಲೆ ಸಿಬಿಐ ತಂಡ ದಾಳಿ ನಡೆಸಿ ಹಲವಾರು ಕಡತಗಳನ್ನು ವಶಪಡಿಸಿಕೊಂಡಿತ್ತು. ವಿದೇಶಿ ಮೂಲಗಳ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ ಸಿಆರ್ಎ) ಉಲ್ಲಂಘನೆ ಮಾಡಿರುವ ತೀಸ್ತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಿಬಿಐ ತನಿಖೆ ನಡೆಸುತ್ತಿದೆ.[ತೀಸ್ತಾ ಸೆಟಲ್ವಾಡ್ ಎನ್ ಜಿಒ ವಿರುದ್ಧ ಚಾರ್ಜ್ ಶೀಟ್]
ಎಫ್ ಸಿಆರ್ ಎ ಸೆಕ್ಷನ್ 8(1) ಕಾಯ್ಡೆ ಉಲ್ಲಂಘನೆ ಹೊತ್ತಿರುವ ಸಭ್ರಂಗ್ ಟ್ರಸ್ಟ್ ಗೆ ಬಂದಿರುವ ವಿದೇಶಿ ದೇಣಿಗೆಯನ್ನು ದುರ್ಬಳಕೆ ಮಾಡಿದ ಆರೋಪ ಹೊತ್ತಿದ್ದಾರೆ. ನಿಯಮದ ಪ್ರಕಾರ ದೇಣಿಗೆ ಮೊತ್ತದ ಶೇ 50ರಷ್ಟು ಮಾತ್ರ ಆಡಳಿತಾತ್ಮಕ ನಿರ್ವಹಣಾ ವೆಚ್ಚವಾಗಿ ಖರ್ಚು ಮಾಡಬಹುದಾಗಿದೆ.

ತೀಸ್ತಾ ವಿರುದ್ಧ ಪ್ರಕರಣಗಳು: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಹಾಗೂ ಆಕೆ ಪತಿ ಜಾವೇದ್ ಆನಂದ್ ವಿರುದ್ಧ ಎಫ್ ಸಿಆರ್ ಎ ಉಲ್ಲಂಘನೆ ಆರೋಪಿಸಿ ಪ್ರಕರಣ ದಾಖಲಾಗಿದೆ. ಉದ್ಯಮಿ ಗುಲಾಂ ಮೊಹಮ್ಮದ್ ಹಾಗೂ ಎನ್ ಜಿಎಒ ಸಭ್ರಂಗ್ ಕಮ್ಯೂನಿಕೇಷನ್ ವಿರುದ್ಧ ಕೂಡಾ ಪ್ರಕರಣ ಬುಕ್ ಆಗಿದೆ.
ಸಭ್ರಂಗ್ ಟ್ರಸ್ಟಿಗೆ ವಿದೇಶದಿಂದ ಸುಮಾರು 1 ಕೋಟಿ ರು ಗೂ ಅಧಿಕ ದೇಣಿಗೆ ಬಂದಿದ್ದು ಇದನ್ನು ಎನ್ ಜಿಒನ ಇತರೆ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ. ಈ ಬಗ್ಗೆ ಗುಜರಾತ್ ಸರ್ಕಾರ ಈ ಹಿಂದೆ ಆರೋಪ ಹೊರೆಸಿತ್ತು.ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ಗೃಹ ಸಚಿವಾಲಯ ವಹಿಸಿತ್ತು. (ಒನ್ ಇಂಡಿಯಾ ಸುದ್ದಿ)












Click it and Unblock the Notifications