• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾವರ್ಕರ್ ಕುರಿತ ರಾಹುಲ್ ಹೇಳಿಕೆಗೆ ಉದ್ಧವ್ ಠಾಕ್ರೆ ಅಸಮಾಧಾನ

|

ಮುಂಬೈ, ಡಿಸೆಂಬರ್ 16: ಹಿಂದುತ್ವದ ಪ್ರತಿಪಾದಕ ವೀರ್ ಸಾವರ್ಕರ್ ಕುರಿತಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

'ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ' ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯ ಕುರಿತು ಕಾಂಗ್ರೆಸ್ ನಾಯಕರಿಂದ ಸ್ಪಷ್ಟೀಕರಣ ಪಡೆಯಲು ಉದ್ಧವ್ ಬಯಸಿದ್ದಾರೆ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.

ಪೌರತ್ವ ಕಾಯ್ದೆ ಬಗ್ಗೆ ಮಾತಾಡಲ್ಲ, ಸಿದ್ದಾಂತವೇ ಬೇರೆ, ಸರ್ಕಾರವೇ ಬೇರೆ

ಮಹಾರಾಷ್ಟ್ರ ಚುನಾವಣೆಗೂ ಮುನ್ನ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನಾ ತಮ್ಮ ಪ್ರಣಾಳಿಕೆಯಲ್ಲಿ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದಾಗಿ ಘೋಷಿಸಿದ್ದವು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಿವಸೇನಾ, ಕಾಂಗ್ರೆಸ್ ಜತೆ ಕೈಜೋಡಿಸಿ ಸರ್ಕಾರ ರಚಿಸಿದೆ. ಸಾವರ್ಕರ್ ಅವರನ್ನು ಟೀಕಿಸುತ್ತಾ ಬಂದಿರುವ ಕಾಂಗ್ರೆಸ್, ಈಗ ಮತ್ತೆ ಅವರ ಹೆಸರು ಪ್ರಸ್ತಾಪಿಸಿರುವುದು ಶಿವಸೇನಾಗೆ ಮುಜುಗರ ಉಂಟುಮಾಡಿದೆ ಎನ್ನಲಾಗಿದೆ.

ಮಹಾರಾಷ್ಟ್ರ ವಿಕಾಸ್ ಅಘಾದಿಯಲ್ಲಿ ಗೊಂದಲಗಳು ಉಂಟಾಗದಂತೆ ತಡೆಯಲು ಕಾಂಗ್ರೆಸ್ ಪಕ್ಷವು ಅನಗತ್ಯ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸಬಾರದು ಎಂದು ಉದ್ಧವ್ ಹೇಳಿದ್ದಾರೆ ಎಂದು ವರದಿಯಾಗಿದೆ.

ರಾಹುಲ್ ಸಾವರ್ಕರ್ ಅಲ್ಲ

ರಾಹುಲ್ ಸಾವರ್ಕರ್ ಅಲ್ಲ

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಬೃಹತ್ 'ಭಾರತ್ ಬಚಾವೋ ರ‍್ಯಾಲಿ'ಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ತಮ್ಮ 'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆ ಕೋರಬೇಕೆಂಬ ಬಿಜೆಪಿಯ ಆಗ್ರಹವನ್ನು ತಿರಸ್ಕರಿಸಿದ್ದರು. ತಮ್ಮ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ. ಸತ್ಯ ಹೇಳಿದ್ದಕ್ಕೆ ಕ್ಷಮೆ ಕೋರುವುದಿಲ್ಲ ಎಂದಿದ್ದರು. ಅಂಡಮಾನ್ ಜೈಲಿನಲ್ಲಿದ್ದ ವೀರ್ ಸಾವರ್ಕರ್, ಅಲ್ಲಿಂದ ಬಿಡುಗಡೆಯಾಗುವ ಸಲುವಾಗಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದರು ಎಂಬ ಆರೋಪವನ್ನು ಕಾಂಗ್ರೆಸ್ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ.

'ರಾಹುಲ್' ಸಾವರ್ಕರ್ ಅಲ್ಲ ಎಂದಿದ್ದಕ್ಕೆ ಮಾನನಷ್ಟ ಮೊಕದ್ದಮೆ!

ರಾಹುಲ್ ಜತೆಗೆ ಮನಸ್ತಾಪ ಇಲ್ಲ

ರಾಹುಲ್ ಜತೆಗೆ ಮನಸ್ತಾಪ ಇಲ್ಲ

ಆದರೆ ಸಾವರ್ಕರ್ ಕುರಿತಾದ ಹೇಳಿಕೆಗೆ ರಾಹುಲ್ ಗಾಂಧಿ ಜತೆ ಮನಸ್ತಾಪ ಇಲ್ಲ ಎಂದು ಉದ್ಧವ್ ಸ್ಪಷ್ಟೀಕರಣ ನೀಡಿದ್ದಾರೆ. 'ನಾವು ವಿಭಿನ್ನ ಸಿದ್ಧಾಂತಗಳ ವಿಭಿನ್ನ ಪಕ್ಷದವರು. ಭೂತದಲ್ಲಿಯೂ ಹೀಗೆಯೇ ಇದ್ದೆವು, ಬಹುಶಃ ಹಾಗೆಯೇ ಇರುತ್ತೇವೆ. ಆದರೆ ಈ ಸರ್ಕಾರ ರಚನೆಯಾಗಿರುವುದು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ (ಸಿಎಂಪಿ) ಆಧಾರದಲ್ಲಿ. ನಾವು ಸರ್ಕಾರವಾಗಿ ಒಗ್ಗಟ್ಟಾಗಿದ್ದೇವೆ. ನಮ್ಮ ಪಕ್ಷ ಈ ಹಿಂದೆಯೇ ಸಾವರ್ಕರ್ ಅವರ ಕುರಿತಾದ ನಮ್ಮ ನಿಲುವನ್ನು ಸ್ಪಷ್ಟಪಡಿಸಿದೆ ಮತ್ತು ನಾವು ಅದಕ್ಕೆ ಅಂಟಿಕೊಂಡಿರುತ್ತೇವೆ ಎಂದು ತಿಳಿಸಿದ್ದಾರೆ.

ಸಾವರ್ಕರ್ ಆಶಯಕ್ಕೆ ಕಾಯ್ದೆ ವಿರುದ್ಧ

ಸಾವರ್ಕರ್ ಆಶಯಕ್ಕೆ ಕಾಯ್ದೆ ವಿರುದ್ಧ

ತಿದ್ದುಪಡಿಯಾದ ಪೌರತ್ವ ಕಾಯ್ದೆಯು ವಿನಾಯಕ ದಾಮೋದರ ಸಾವರ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿದೆ ಎಂದು ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ. 'ಭಾರತವು ಸಿಂಧೂ ನದಿಯಿಂದ ಹಿಂದೂ ಮಹಾಸಾಗರದವರೆಗಿನ ದೇಶ ಎಂದು ಸಾವರ್ಕರ್ ನಿಲುವು ಹೊಂದಿದ್ದರು. ಸಾವರ್ಕರ್ ಅವರ ಬಯಕೆಯ ದೇಶವನ್ನು ಒಂದು ಮಾಡಲು ನೀವು ಹೊರಟಿದ್ದೀರಾ? ಇಂದು ಇಡೀ ದೇಶದಲ್ಲಿ ಕ್ಷೋಭೆ ಉಂಟಾಗಿದೆ. ಆ ದೇಶಗಳಿಂದ (ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ) ಹಿಂದೂಗಳನ್ನು ಕರೆಯುತ್ತಿದ್ದೀರ. ಇದರ ಅರ್ಥ ನೀವು ಸಾವರ್ಕರ್ ಅವರ ಚಿಂತನೆಗಳನ್ನು ನಿರ್ಲಕ್ಷಿಸುತ್ತಿದ್ದೀರಿ' ಎಂದು ಠಾಕ್ರೆ ಕಿಡಿಕಾರಿದ್ದಾರೆ.

ರಾಹುಲ್ ವಿರುದ್ಧ ರಾವತ್ ಕಿಡಿ

ರಾಹುಲ್ ವಿರುದ್ಧ ರಾವತ್ ಕಿಡಿ

ಶಿವಸೇನಾ ಸಂಸದ ಸಂಜಯ್ ರಾವತ್ ಕೂಡ ರಾಹುಲ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ವೀರ್ ಸಾವರ್ಕರ್ ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ವರಪ್ರಸಾದ. ಸಾವರ್ಕರ್ ಹೆಸರಿನಲ್ಲಿ ದೇಶದ ಹೆಮ್ಮೆ ಮತ್ತು ಗೌರವವಿದೆ. ನೆಹರೂ ಮತ್ತು ಗಾಂಧಿ ಅವರಂತೆ ಸಾವರ್ಕರ್ ಕೂಡ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅಂತಹ ಪ್ರತಿ ಮಹಾನ್ ವ್ಯಕ್ತಿಯನ್ನು ಗೌರವಿಸಬೇಕಿದೆ. ಈ ವಿಚಾರದಲ್ಲಿ ಕೊಡ-ಕೊಳ್ಳುವ ಯಾವ ವಿಚಾರವೂ ಇಲ್ಲ. ಜೈ ಹಿಂದ್' ಎಂದು ರಾವತ್ ಟ್ವೀಟ್ ಮಾಡಿದ್ದಾರೆ.

English summary
Maharashtra CM Uddhav Thackeray is unhappy over Congress leader Rahul Gandhi's remark on Veer Savarkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X