'ದಲಿತ' ಪದಬಳಕೆ ಮಾಡಿದರೆ ತಪ್ಪೇನು? ರಾಮದಾಸ್ ಅಠಾವಳೆ
ಮುಂಬೈ, ಸೆಪ್ಟೆಂಬರ್ 11: "ದಲಿತ ಎಂಬ ಪದಪ್ರಯೋಗ ಮಾಡಿದರೆ ತಪ್ಪೇನು?" ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ಪ್ರಶ್ನಿಸಿದ್ದಾರೆ.
'ದಲಿತ' ಪದಪ್ರಯೋಗ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ತಾಕೀತು ಹಾಕಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಅಠಾವಳೆ, ಸಂದರ್ಭದ ಬಂದರೆ ಈ ಕುರಿತು ಸುಪ್ರೀಂ ಕೋರ್ಟ್ ಮೊರೆಹೋಗುವುದಾಗಿ ಹೇಳಿದ್ದಾರೆ.
"ದಲಿತ ಎಂಬ ಪದಪ್ರಯೋಗ ಮಾಡುವುದರಿಂದ ಏನು ತಪ್ಪಾಗುತ್ತದೆ? ಸರ್ಕಾರಿ ದಾಖಲೆಗಳಲ್ಲಿ ಈಗಾಗಲೇ ಪರಿಶಿಷ್ಠ ಜಾತಿ ಮತ್ತು ಪಂಗಡ ಎಂಬ ಪದ ಬಳಕೆಯಲ್ಲಿದೆ. ಅಂತೆಯೇ ದಲಿತ ಶಬ್ದವೂ ಬಳಕೆಗೆ ಬರುತ್ತದೆ" ಎಂದು ಅವರು ಹೇಳಿದ್ದಾರೆ.

ದಲಿತ ಎಂಬ ಪದಬಳಕೆಗೆ ಸಂಬಂಧಿಸಿದಂತೆ ನಿರ್ದೇಶನ ನೀಡಬೇಕೆ?' ಎಂದು ಬಾಂಬೆ ಹೈಕೋರ್ಟಿನ ನಾಗ್ಪುರ ಬೆಂಚ್ ಕೇಂದ್ರ ಸರ್ಕಾರವನ್ನು ಕೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ದಲಿತ ಪದದ ಬದಲು ಪರಿಶಿಷ್ಟ ಜಾತಿ ಎಂಬ ಪದವನ್ನು ಬಳಕೆ ಮಾಡಲು ತಿಳಿಸಿತ್ತು. ದಲಿತ ಎಂಬುದಕ್ಕೆ ಸಾಂವಿಧಾನಿಕ ಪದ ಪರಿಶಿಷ್ಟ ಜಾತಿ ಎಂದಾಗಿದ್ದು, ಇನ್ನು ಮೇಲೆ ಪ್ರಮಾಣ ಪತ್ರ ಅಥವಾ ಇನ್ನು ಯಾವುದೇ ಗುರುತಿನ ಚೀಟಿಗಳಲ್ಲಿ ಇದೇ ಪದವನ್ನು ಬಳಸುವಂತೆ ಕೇಂದ್ರ ಸರ್ಕಾರ ಹೇಳಿತ್ತು.












Click it and Unblock the Notifications