ಮಹಾರಾಷ್ಟ್ರ ರಾಜಕೀಯ; 52 ಶಾಸಕರು ಎನ್‌ಸಿಪಿ ಜೊತೆ!
ಮುಂಬೈ, ನವೆಂಬರ್ 25 : ಮಹಾರಾಷ್ಟ್ರದ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಎನ್‌ಸಿಪಿಯ 52 ಶಾಸಕರು ನಮ್ಮ ಜೊತೆ ಇದ್ದಾರೆ ಎಂದು ಪಕ್ಷದ ನಾಯಕ ನವಾಬ್ ಮಲ್ಲಿಕ್ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ದೇವೇಂದ್ರ ಫಡ್ನವೀಸ್‌ಗೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಬೆಂಬಲ ನೀಡಿದ್ದಾರೆ. ಫಡ್ನವೀಸ್ ಮುಖ್ಯಮಂತ್ರಿಯಾಗಿ, ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸರ್ಕಾರಕ್ಕೆ ಬಹುಮತ ಸಾಬೀತು ಮಾಡುವ ಮ್ಯಾಜಿಕ್ ನಂಬರ್ ಇದೆಯೇ?.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ಮೈತ್ರಿಕೂಟ ಸರ್ಕಾರ ರಚನೆ ಮಾಡಲು ತಮಗೆ ಶಾಸಕರ ಬೆಂಬಲವಿದೆ ಎಂದು ಹೇಳುತ್ತಿವೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, "ಅಜಿತ್ ಪವಾರ್ ಹೊರತುಪಡಿಸಿ ಉಳಿದ ಎಲ್ಲಾ 53 ಶಾಸಕರು ನಮ್ಮ ಜೊತೆ ಇದ್ದಾರೆ" ಎಂದು ಹೇಳಿದ್ದಾರೆ. ಎನ್‌ಸಿಪಿ ನಾಯಕರು ಹೇಳಿಕೆಗಳು ಕುತೂಹಲಕ್ಕೆ ಕಾರಣವಾಗಿವೆ.
ಸುಪ್ರೀಂಕೋರ್ಟ್‌ನಲ್ಲಿ ಇಂದು ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಯಲಿದೆ. ಶಿವಸೇನೆ-ಕಾಂಗ್ರೆಸ್ ಮತ್ತು ಎನ್‌ಸಿಪಿ ಸರ್ಕಾರ ರಚನೆ ಮಾಡಲು ನಮ್ಮ ಬಳಿ ಅಗತ್ಯ ಸಂಖ್ಯಾಬಲವಿದೆ ಎಂದು ನ್ಯಾಯಾಲಯಕ್ಕೆ ಶಾಸಕರ ಬೆಂಬಲವಿರುವ ಪತ್ರ ಸಲ್ಲಿಸಲಿದೆ.
ನವೆಂಬರ್ 30ರಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲು ರಾಜ್ಯಪಾಲರು ಸಮಯ ನೀಡಿದ್ದಾರೆ. ಆದರೆ, ಸುಪ್ರೀಂಕೋರ್ಟ್ ಇಂದು ತಕ್ಷಣ ಬಹುಮತ ಸಾಬೀತು ಮಾಡಿ ಎಂದು ಆದೇಶ ನೀಡಿದರೆ ರಾಜಕೀಯ ಚಿತ್ರಣ ಬೇರೆಯಾಗಲಿದೆ.
ಶಿವಸೇನೆ ಮತ್ತು ಕಾಂಗ್ರೆಸ್ ಶಾಸಕರು ವಿವಿಧ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಶನಿವಾರ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಬಿಜೆಪಿಯ ಬಳಿ 105 ಶಾಸಕರು ಇದ್ದಾರೆ. ಅಜಿತ್ ಪವಾರ್ ಬಳಿ ಎಷ್ಟು ಶಾಸಕರು ಇದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications