ಬಿಜಲಾನಿ ಸೇವಕಿಯ ರೇಪ್: ಶಾರೂಖ್ ಡ್ರೈವರ್ ಅರೆಸ್ಟ್
ಮುಂಬೈ, ಜೂನ್ 26: ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಅವರ ಡ್ರೈವರ್ ಬಂಧನಕ್ಕೀಡಾಗಿದ್ದಾನೆ. ಬಾಲಿವುಡ್ ಲೋಕದ ಹಳೆಯ ವರ್ಚಸ್ವೀ ನಟಿ ಸಂಗೀತಾ ಬಿಜಲಾನಿ ಅವರ ಪರಿಚಾರಿಕೆಯಾಗಿದ್ದ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪದ ಮೇಲೆ ಶಾರೂಖ್ ಖಾನ್ ಅವರ ಕಾರು ಚಾಲಕನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಆರೋಪಿ ಕಾರು ಚಾಲಕ, 35 ವರ್ಷದ ರಾಜೇಂದ್ರ ಗೌತಮ್ ಅಲಿಯಾಸ್ ಪಿಂಟು ಮಿಶ್ರಾ, ಶಾರೂಕ್ ಅವರ ವೈಭವೋಪೇತ 'ಮನ್ನತ್' ನಿವಾಸದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಶಾರೂಖ್ ಅವರ ಮಕ್ಕಳನ್ನು ಸ್ಕೂಲಿಗೆ ಬಿಟ್ಟುಬರುವುದು ಈತನ ಕಾಯಕವಾಗಿತ್ತು.

ಈ ಮಧ್ಯೆ ಬಿಡುವಿನ ವೇಳೆಯಲ್ಲಿ ಆರೋಪಿ ಪಿಂಟು ಮಿಶ್ರಾ ಗೆಳೆಯನೊಬ್ಬನ ಮೂಲಕ ನಟಿ ಸಂಗೀತಾ ಬಿಜಲಾನಿ ಅವರ ಪರಿಚಾರಿಕೆಯ ಮೊಬೈಲ್ ನಂಬರ್ ಪಡೆದಿದ್ದಾನೆ. ಈ ಬಾಧಿತ ಯುವತಿ ಮಹಾರಾಷ್ಟ್ರದ ಲಾತೂರ್ ಮೂಲದವರು.
17 ವರ್ಷದ ಸದರಿ ಯುವತಿಯನ್ನು ಆರೋಪಿ ಪಿಂಟು ಮಿಶ್ರಾ ಮೊದಲು ಪುಸಲಾಯಿಸಿದ್ದಾನೆ. ಶಾರೂಖ್ ಖಾನ್ ಅವರ ಮನೆಯಲ್ಲಿ ಕೆಲಸ ಖಾಲಿ ಇದೆ. ಅದನ್ನು ನಿನಗೇ ಕೊಡಿಸುವೆ, ಬಾ ಎಂದು ಕರೆದಿದ್ದಾನೆ. ಮಹಾನಗರದಲ್ಲಿರು ನಳಸೋಪರದಲ್ಲಿ ಹೋಟೆಲೊಂದಕ್ಕೆ ಆಕೆಯನ್ನು ಕರೆದೊಯ್ದ ಪಿಂಟು ಮಿಶ್ರಾ ಈ ಕುಕೃತ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿಯ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಬಾಂದ್ರಾ ಪೊಲೀಸರು ಬುಧವಾರ ಆರೋಪಿ ಪಿಂಟು ಮಿಶ್ರಾನನ್ನು ವಶಕ್ಕೆ ತೆಗೆದುಕೊಂಡು ಇಂದು ಗುರುವಾರ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.












Click it and Unblock the Notifications