ಬೀದಿಗಿಳಿದ ವಲಸೆ ಕಾರ್ಮಿಕರು; ಠಾಕ್ರೆಗೆ ಅಮಿತ್ ಶಾ ಕರೆ
ಮುಂಬೈ, ಏಪ್ರಿಲ್ 14: ವಲಸೆ ಕಾರ್ಮಿಕರು ಮುಂಬೈನಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ನೂರಾರು ಜನರು ರೈಲು ನಿಲ್ದಾಣದಲ್ಲಿ ಸೇರಿ ಲಾಕ್ ಡೌನ್ ವಿಸ್ತರಣೆ ಮಾಡಿದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಮಂಗಳವಾರ ಸಂಜೆ ಈ ಘಟನೆ ನಡೆದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ ರಾಕ್ರೆಗೆ ಕರೆ ಮಾಡಿದ್ದಾರೆ. "ಇಂತಹ ಪ್ರಕರಣದಿಂದ ಕೊರೊನಾ ವಿರುದ್ಧದ ದೇಶದ ಹೋರಾಟಕ್ಕೆ ಹಿನ್ನಡೆಯಾಗಲಿದೆ" ಎಂದು ಹೇಳಿದ್ದಾರೆ.
"ಇಂತಹ ಘಟನೆಗಳು ನಡೆಯದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ" ಎಂದು ಅಮಿತ್ ಶಾ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ.

ಮಂಗಳವಾರ ಸಂಜೆ ಸುಮಾರು 1 ಸಾವಿರ ವಲಸೆ ಕಾರ್ಮಿಕರು ಬಾಂದ್ರಾ ರೈಲು ನಿಲ್ದಾಣದ ಮುಂದೆ ಸೇರಿದರು. ತಮ್ಮ ಊರಿಗೆ ಹೋಗಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಘೋಷಣೆಗಳನ್ನು ಕೂಗಿದರು.
ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಕೊರೊನಾ ಹರಡದಂತೆ ತಡೆಯಲು ಜಾರಿಗೊಳಿಸಿರುವ ಲಾಕ್ ಡೌನ್ ಅನ್ನು ಮೇ 3ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದರು. ಇದರಿಂದಾಗಿ ಆಕ್ರೋಶಗೊಂಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ವಲಸೆ ಕಾರ್ಮಿಕರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ಎಲ್ಲರೂ ವಾಪಸ್ ಆದರು ಎಂದು ಪೊಲೀಸರು ಹೇಳಿದ್ದಾರೆ. ಈ ಕಾರ್ಮಿಕರು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದವರು.
ಕೊರೊನಾ ಸೋಂಕು ಪೀಡಿತರಲ್ಲಿ ಮಹಾರಾಷ್ಟ್ರವೇ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 2455 ಪ್ರಕರಣಗಳು ದಾಖಲಾಗಿದ್ದು, 160 ಜನರು ಇದುವರೆಗೂ ಮೃತಪಟ್ಟಿದ್ದಾರೆ. ಮುಂಬೈ ನಗರದಲ್ಲಿಯೇ 1540 ಪ್ರಕರಣಗಳು ದಾಖಲಾಗಿವೆ.












Click it and Unblock the Notifications