ಓಮಿಕ್ರಾನ್ ಭೀತಿ: ಮುಂಬೈನಲ್ಲಿ ಶನಿವಾರ, ಭಾನುವಾರ ನಿಷೇಧಾಜ್ಞೆ ಜಾರಿ
ಮುಂಬೈ, ಡಿಸೆಂಬರ್ 11: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಶುಕ್ರವಾರ ಒಂದೇ ದಿನ 7 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಕೊವಿಡ್-19 ರೂಪಾಂತರ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರ ಹಿನ್ನೆಲೆ ರಾಜಧಾನಿ ಮುಂಬೈನಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶನಿವಾರ ಮತ್ತು ಭಾನುವಾರ ಮುಂಬೈನಲ್ಲಿ 144 ಸೆಕ್ಷನ್ ಜಾರಿಯಲ್ಲಿ ಇರಲಿದೆ.
ಓಮಿಕ್ರಾನ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೆರವಣಿಗೆ, ಮೋರ್ಚಾಗಳನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಮೂರು ವರ್ಷದ ಮಗುವಿನಲ್ಲೂ ಓಮಿಕ್ರಾನ್:
ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ ಏಳು ಕೊವಿಡ್-19 ಕೂಪಾಂತರ ಓಮಿಕ್ರಾನ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಅವರಲ್ಲಿ ಮೂವರು ಮುಂಬೈ ಮೂಲದವರಾಗಿದ್ದು, ಮೂರು ವರ್ಷದ ಮಗುವಿನಲ್ಲೂ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಇವರಲ್ಲಿ ಹಲವರಿಗೆ ಸೋಂಕಿನ ಲಕ್ಷಣಗಳೇ ಕಂಡು ಬಂದಿರಲಿಲ್ಲ ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.
ಮುಂಬೈನಲ್ಲಿ ಮೂರು ಓಮಿಕ್ರಾನ್ ಸೋಂಕಿತ ಪ್ರಕರಣಗಳು ಮತ್ತು ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯಲ್ಲಿ ನಾಲ್ಕು ಸೋಂಕಿತ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಮುಂಬೈನಲ್ಲಿ ಪತ್ತೆಯಾದ ಮೂವರು ರೋಗಿಗಳು 48, 25 ಮತ್ತು 37 ವರ್ಷ ವಯಸ್ಸಿನ ಪುರುಷರಾಗಿದ್ದು, ತಾಂಜಾನಿಯಾ, ಯುಕೆ ಮತ್ತು ದಕ್ಷಿಣ ಆಫ್ರಿಕಾ ಪ್ರಯಾಣದ ಹಿನ್ನಲೆಯನ್ನು ಹೊಂದಿದ್ದಾರೆ.
ಡಿಸೆಂಬರ್ 1 ರಿಂದ, ಒಟ್ಟು 93 ಅಂತರಾಷ್ಟ್ರೀಯ ಪ್ರಯಾಣಿಕರಿಗೆ COVID-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇವುಗಳಲ್ಲಿ 83 ಒಮಿಕ್ರಾನ್ ಅಪಾಯದಲ್ಲಿರುವ ರಾಷ್ಟ್ರಗಳಿಂದ ಬಂದವರೇ ಆಗಿದ್ದಾರೆ, ಉಳಿದ 13 ಮಂದಿ ಇತರ ದೇಶಗಳಿಂದ ಬಂದವರು ಎಂದು ಲಾವ್ ಅಗರ್ವಾಲ್ ಹೇಳಿದ್ದಾರೆ. ಇದುವರೆಗೆ 59 ದೇಶಗಳಲ್ಲಿ ಒಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.
"ನವೆಂಬರ್ 24 ರವರೆಗೆ ಕೇವಲ 2 ರಾಷ್ಟ್ರಗಳಲ್ಲಿ ಮಾತ್ರ ಓಮಿಕ್ರಾನ್ ರೂಪಾಂತರ ಪ್ರಕರಣಗಳು ವರದಿಯಾಗಿದ್ದು, ಈಗ, 59 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ 59 ದೇಶಗಳಲ್ಲಿ 2,936 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದಲ್ಲದೇ, 78,054 ಸಂಭವನೀಯ ಪ್ರಕರಣಗಳು ಪತ್ತೆಯಾಗಿವೆ. ಅವುಗಳ ಜೀನೋಮ್ ಸೀಕ್ವೆನ್ಸಿಂಗ್ ನಡೆಯುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ 32 ಓಮಿಕ್ರಾನ್ ಸೋಂಕಿತ ಪ್ರಕರಣ:
ಭಾರತದ ಕೊರೊನಾವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 17 ಪ್ರಕರಣಗಳು, ರಾಜಸ್ಥಾನದಲ್ಲಿ 9 ಪ್ರಕರಣಗಳು, ಗುಜರಾತ್ 3, ಕರ್ನಾಟಕ 2 ಮತ್ತು ದೆಹಲಿಯಲ್ಲಿ ಒಂದು ಪ್ರಕರಣಗಳು ವರದಿಯಾಗಿವೆ. ದೇಶದಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿರುವುದರ ಹಿನ್ನೆಲೆ ಶಿಸ್ತುಕ್ರಮಗಳನ್ನು ಜಾರಿಗೊಳಿಸುವುದಕ್ಕೆ ಸರ್ಕಾರ ಮುಂದಾಗಿದೆ.
ಮಾಸ್ಕ್ ಬಳಕೆ ಮತ್ತು ಸುರಕ್ಷತಾ ಮಾನದಂಡಗಳ ಪಾಲನೆಯು ಕಡಿಮೆ ಆಗುತ್ತಿರುವುದರ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. "ಮಾಸ್ಕ್ ಬಳಕೆಯ ಕುಸಿತದ ವಿರುದ್ಧ WHO ಎಚ್ಚರಿಕೆ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ Omicron ಇಡೀ ಚಿತ್ರಣವನ್ನೇ ಬದಲಿಸುತ್ತಿದ್ದು, ತೀವ್ರ ತೊಂದರೆ ಉಂಟಾಗುತ್ತಿದೆ. ನಾವು ಈಗ ಅಪಾಯಕಾರಿ ಮತ್ತು ಸ್ವೀಕರಿಸಲು ಸಾಧ್ಯವಾಗದ ಮಟ್ಟದಲ್ಲಿದ್ದೇವೆ. ಕೊವಿಡ್-19 ಲಸಿಕೆ ಮತ್ತು ಮುಖವಾಡಗಳು ಎರಡೂ ಮುಖ್ಯವೆಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಆರೋಗ್ಯಕ್ಕಾಗಿ NITI ಆಯೋಗದ ಸದಸ್ಯ ಡಾ ವಿಕೆ ಪಾಲ್ ಹೇಳಿದ್ದಾರೆ.












Click it and Unblock the Notifications