ಮಹಾರಾಷ್ಟ್ರ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿಕೆ
ಮುಂಬೈ, ಸಪ್ಟೆಂಬರ್.23: ಮಹಾರಾಷ್ಟ್ರದ ಭಿವಾಂಡಿ ಪ್ರದೇಶದಲ್ಲಿ ಸಂಭವಿಸಿದ ಕಟ್ಟಡ ದುರಂತದಲ್ಲಿ ಪ್ರಾಣ ಬಿಟ್ಟವರ ಸಂಖ್ಯೆಯು 33ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಈ ಬಗ್ಗೆ ಮಾಹಿತಿ ನೀಡಿದೆ.
ಸಪ್ಟೆಂಬರ್.21ರ ಸೋಮವಾರ ಬೆಳಗಿನ ಜಾವ 3.45ರ ಸಂದರ್ಭದಲ್ಲಿ ಭಿವಾಂಡಿಯಲ್ಲಿ ಕಟ್ಟಡ ದುರಂತ ಸಂಭವಿಸಿತ್ತು. ಮೂರು ಅಂತಸ್ತಿನ ಕಟ್ಟಡ ಕುಸಿತದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಂಗಳವಾರದ ಲಭ್ಯವಾದ ಮಾಹಿತಿ ಪ್ರಕಾರ 17 ಜನರು ಅವಶೇಷಗಳಡಿ ಸಿಲುಕಿ ಪ್ರಾಣ ಬಿಟ್ಟಿದ್ದರು.
ಇದೀಗ ಸಾವಿನ ಸಂಖ್ಯೆಯು 33ಕ್ಕೆ ಏರಿಕೆಯಾಗಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತಷ್ಟು ಕಾರ್ಮಿಕರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಭಿವಾಂಡಿ ಕಟ್ಟಡ ದುರಂತದ ಕಾರಣದ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಆದೇಶಿಸಿದ್ದಾರೆ. ಇನ್ನು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಕಟ್ಟಡ ಸುರಕ್ಷಿತವಲ್ಲ ಎಂದು ನೋಟಿಸ್:
ಭಿವಾಂಡಿಯಲ್ಲಿದ್ದ 3 ಅಂತಸ್ತಿನ ಕಟ್ಟಡವು ಅಸ್ಥಿರಗೊಂಡಿದ್ದು, ವಾಸಕ್ಕೆ ಸುರಕ್ಷಿತವಲ್ಲ. ಸಾಧ್ಯವಾದಷ್ಟು ಬೇಗ ಅಲ್ಲಿಂದ ಮನೆಗಳನ್ನು ಖಾಲಿ ಮಾಡುವಂತೆ ಮೊದಲೇ ಭಿವಾಂಡಿ-ನಿಜಾಂಪುರ್ ಮುನ್ಸಿಪಲ್ ಕಾರ್ಪೋರೇಷನ್ ನೋಟಿಸ್ ಜಾರಿಗೊಳಿಸಿತ್ತು. ಇದನ್ನು ಲಘುವಾಗಿ ತೆಗೆದುಕೊಂಡು, ಮನೆ ಖಾಲಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಇಂಥದೊಂದು ದುರಂತ ಸಂಭವಿಸಿದೆ ಎಂದು ಕಮಿಷನರ್ ಪಂಕಜ್ ಆಶಿಯಾ ಹೇಳಿದ್ದಾರೆ.












Click it and Unblock the Notifications