'ಸ್ಟೋರಿಯಲ್ಲಿ ಟ್ವಿಸ್ಟ್': ಎನ್‌ಸಿಪಿಯಿಂದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಉಚ್ಚಾಟನೆ?
ಮುಂಬೈ, ನವೆಂಬರ್ 23: ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ)ಯಿಂದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಉಚ್ಚಾಟನೆ ಮಾಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಂದೆಡೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್, ಶಿವಸೇನಾ ಸೇರಿ ಸರ್ಕಾರ ರಚನೆ ಮಾಡುವ ಕುರಿತು ವಾರಗಳಿಂದ ಸಭೆ ನಡೆಸಿದ್ದು, ಶುಕ್ರವಾರ ರಾತ್ರಿವರೆಗೂ ಸಭೆ ನಡೆದಿತ್ತು.
ಅಂತಿಮದಲ್ಲಿ ಎನ್‌ಸಿಪಿ, ಶಿವಸೇನಾ ಸರ್ಕಾರ ರಚನೆ ಮಾಡಲು ಒಪ್ಪಿಗೆ ನೀಡಿತ್ತು ಆದರೆ ಕಾಂಗ್ರೆಸ್ ಒಂದು ದಿನದ ಕಾಲಾವಕಾಶವನ್ನು ಕೇಳಿತ್ತು. ಆದರೆ ರಾತ್ರೋರಾತ್ರಿ ಮಹಾರಾಷ್ಟ್ರದ ರಾಜಕೀಯ ಚಿತ್ರಣವೇ ಬದಲಾಗಿದೆ.
ದೇವೇಂದ್ರ ಫಡ್ನವಿಸ್ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರೆ, ಇನ್ನು ಶರದ್ ಪವಾರ್ ಸಂಬಂಧಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಅಜಿತ್ ಪವಾರ್ ಎನ್‌ಸಿಪಿಯಿಂದ ಉಚ್ಚಾಟನೆ?
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಎನ್‌ಸಿಪಿಯಿಂದ ಉಚ್ಚಾಟನೆ ಮಾಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿವೆ. ಒಂದೊಮ್ಮೆ ಹಾಗೆ ನಡೆದರೆ ಮಹಾರಾಷ್ಟ್ರ ರಾಜಕೀಯದ ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತದೆ. ಅಜಿತ್ ಪವಾರ್ ಗೆ ಬೆಂಬಲ ನೀಡಲು ಈಗಲೇ 22ಕ್ಕೂ ಹೆಚ್ಚು ಮಂದಿ ಶಾಸಕರು ಸಿದ್ಧರಿದ್ದಾರೆ, ಒಂದೊಮ್ಮೆ ಅಜಿತ್ ಪವಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದರೆ ಶಾಸಕರು ಅವರಿಗೆ ಬೆಂಬಲ ನೀಡುವುದರಿಂದ ಹಿಂದೆ ಸರಿಯುವ ಎಲ್ಲಾ ಸಾಧ್ಯತೆಗಳೂ ಇವೆ.

ನವೆಂಬರ್ 30 ಬಹುಮತ ಸಾಬೀತು
ನವೆಂಬರ್ 30ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಹುಮತ ಸಾಬೀತುಪಡಿಸಲಿದ್ದಾರೆ. ನಾವು ಬಹುಮತ ಸಾಬೀತುಪಡಿಸುವುದರಲ್ಲಿ ಖಂಡಿತವಾಗಿಯೂ ಯಶಶ್ವಿಯಾಗುತ್ತೇವೆ ಎಂಬ ನಂಬಿಕೆ ನಮಗಿದೆ ಎಂದು ಸ್ವತಃ ಫಡ್ನವಿಸ್ ಹೇಳಿಕೊಂಡಿದ್ದಾರೆ.

ಮೂರು ಪಕ್ಷಕ್ಕಿಂತ, ದ್ವಿಪಕ್ಷ ಸರ್ಕಾರ ಉತ್ತಮ
ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವುದಕ್ಕಿಂತ ಎರಡೇ ಪಕ್ಷಗಳು ಸೇರಿ ಮೈತ್ರಿ ಮಾಡಿಕೊಂಡು ಸ್ಥಿರ ಸರ್ಕಾರ ರಚನೆ ಮಾಡುವುದು ಉತ್ತಮ. ಗೊಂದಲಗಳು ಕಡಿಮೆ, ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಾವು ಸರ್ಕಾರ ರಚನೆ ಮಾಡಲು ಮುಂದಾದೆವು ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರ ಬಲಾಬಲ
ನಮ್ಮ ಮೈತ್ರಿಗೆ (ಬಿಜೆಪಿ-ಶಿವಸೇನಾ) ಸ್ಪಷ್ಟ ಬಹುಮತ ನೀಡಲಾಗಿತ್ತು. ಆದರೆ ಶೀವಸೇನೆಯು ಬೇರೆ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಯಿತು. ಹೀಗಾಗಿ ರಾಷ್ಟ್ರಪತಿ ಆಡಳಿತ ಹೇರಿಕೆ ಆಗಿತ್ತು. ಆದರೆ ಈಗ ಸ್ಥಿರ ಸರ್ಕಾರ ರಚನೆ ಮಾಡಲೆಂದು ಅಜಿತ್ ಪವಾರ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಫಟ್ನವಿಸ್ ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ಪಕ್ಷಗಳ ಬಲಾಬಲ ಇಂತಿದೆ. ಬಿಜೆಪಿ-105, ಎನ್‌ಸಿಪಿ-54, ಶಿವಸೇನಾ- 56, ಕಾಂಗ್ರೆಸ್- 44, ಇತರೆ-29. ಸರ್ಕಾರ ರಚನೆ ಮಾಡಲು 145 ಶಾಸಕರ ಬಲ ಬೇಕಿದ್ದು. ಸರ್ಕಾರ ರಚಿಸಿರುವ ಬಿಜೆಪಿ-ಎನ್‌ಸಿಪಿ ಬಂಡಾಯ ಶಾಸಕರ ಬಳಿ ಈಗ 132 ಸಂಖ್ಯೆ ಇದೆ.












Click it and Unblock the Notifications