ಬಿಜೆಪಿ ಶಾಸಕನ ನಾಲಿಗೆಗೆ 5 ಲಕ್ಷ ರೂ. ಬಹುಮಾನ ಎಂದ ಕಾಂಗ್ರೆಸ್ ಮುಖಂಡ
Recommended Video

ಮುಂಬೈ, ಸೆಪ್ಟೆಂಬರ್ 07: ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಶಾಸಕ ರಾಮ್ ಕದಮ್ ಅವರ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂ.ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡ ಸುಬೋಧ್ ಸಾವೋಜಿ ಹೇಳಿದ್ದಾರೆ.
"ನೀವು ಪ್ರೀತಿಸುವ ಹುಡುಗಿಯನ್ನು ಅಪಹರಿಸಿ ತಂದು ಮದುವೆ ಮಾಡಿಸುತ್ತೇನೆ ಎಂಬ ಅಪ್ರಬುದ್ಧ, ಅಸಂಬದ್ಧ ಹೇಳಿಕೆ ನೀಡಿರುವ ರಾಮ್ ಕದಮ್ ಶಾಸಕರಾಗಲು ಲಾಯಕ್ಕಿಲ್ಲ. ಆದ್ದರಿಂದ ಅವರ ನಾಲಿಗೆ ಕತ್ತರಿಸಿದವರಿಗೆ ನಾನು 5 ಲಕ್ಷ ರೂ. ಬಹುಮಾನ ಘೋಷಿಸುತ್ತೇನೆ" ಎಂದು ಮಹಾರಾಷ್ಟ್ರದ ಮಾಜಿ ಸಚಿವ ಸುಬೋಧ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಮೊಸರು ಕುಡಿಕೆ ಆಚರಣೆಯ ವೇಳೆ ಮಾತನಾಡುತ್ತಿದ್ದ ಮಹಾರಾಷ್ಟ್ರದ ಘಾಟ್ಕೋಪರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್ ಕದಮ್, 'ನೀವು ಇಷ್ಟಪಡುವ ಹುಡುಗಿ ನಿಮ್ಮ ಪ್ರೀತಿಯನ್ನು ನಿರಾಕರಿಸಿದರೆ ನನಗೆ ಹೇಳಿ. ನಾನು ಆಕೆಯನ್ನು ಅಪಹರಿಸಿ ತಂದು ನಿಮ್ಮೊಂದಿಗೆ ಮದುವೆ ಮಾಡಿಸುತ್ತೇನೆ' ಎಂಬ ಹೇಳಿಕೆ ನೀಡಿದ್ದರು.

ಅವರು ಈ ಹೇಳಿಕೆ ನೀಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿ, ವಿವಾದ ಸೃಷ್ಟಿಸಿತ್ತು. "ನನ್ನ ಮಾತನ್ನು ಸರಿಯಾಗಿ ಅರ್ಥೈಸಲಾಗಿಲ್ಲ. ನಾನು ಹೇಳಿದ್ದು ತಂದೆ-ತಾಯಿಗಳ ಒಪ್ಪಿಗೆ ಪಡೆದು ಮದುವೆಯಾಗಿ ಎಂದಷ್ಟೇ" ಎಂದು ನಂತರ ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದರು.












Click it and Unblock the Notifications