LPG ವಿತರಣೆ ವಿಳಂಬವಾದ್ರೆ ಡೀಲರ್ ಲೈಸೆನ್ಸ್ ಢಮಾರ್
ಮುಂಬೈ, ಅ.8: ಅಡುಗೆ ಮನೆಯಲ್ಲಿರುವ ಗೃಹಿಣಿಯರೇ ನಿಮ್ಮ ಕೈಗೊಂದು ಬಲಶಾಲಿ ಅಸ್ತ್ರ ನೀಡಲಾಗಿದೆ. ಅಕಸ್ಮಾತ್ ನಿಮ್ಮ ಮನೆಗೆ ಅಡುಗೆ ಅನಿಲ ಸಕಾಲದಲ್ಲಿ ವಿತರಣೆಯಾಗದೆ ಸಿಲಿಂಡರ್ ವಿಳಂಬವಾಗಿ ನಿಮ್ಮ ಮನೆ ಬಾಗಿಲು ತಲುಪಿದೆ ಎಂದು ನಿಮಗೆ ಅನ್ನಿಸಿದಾಗ ಈ ಅಸ್ತ್ರ ಪ್ರಯೋಗಿಸಿ ಡೀಲರ್ ಲೈಸೆನ್ಸ್ ಅನ್ನೇ ಢಮಾರ್ ಅನ್ನಿಸಬಹುದು.
ಈ LPG ಡೀಲರುಗಳು ಇದ್ದಾರಲ್ಲಾ. ಇವರದು ನಿನ್ನೆ ಮೊನ್ನೆಯ ಗೋಳಲ್ಲ. ನಿಗದಿತ ಸಮಯದೊಳಗೆ ಸಿಲಿಂಡರ್ ಪೂರೈಸುವುದು ಅಂದರೆ ಈ ಡೀಲರುಗಳಿಗೆ ಅದೆಂಥದ್ದೋ ಸಂಕಟ. ಆದರೆ ಇನ್ನುಮುಂದೆ ಹಾಗಿಲ್ಲ.

ಏನಪ್ಪಾ ಅಂದರೆ, ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಅನಿಲ ವಿತರಕರಿಗೆ (ಡೀಲರ್) ಹೊಸದಾಗಿ ಸ್ಟಾರ್ ರೇಟಿಂಗ್ ವ್ಯವಸ್ಥೆಯನ್ನು ಪರಿಚಯಿಸಿವೆ. ಅದರ ಪ್ರಕಾರ ಭರ್ತಿ ಸಿಲಿಂಡರ್ ಅನ್ನು ವಿತರಕರು ಗ್ರಾಹಕರಿಗೆ 8 ದಿನದೊಳಗೆ ನೀಡದಿದ್ದಲ್ಲಿ ಅವರು ತಮ್ಮ ರೇಟಿಂಗ್ ಮತ್ತು ಪರವಾನಗಿ ಕಳೆದುಕೊಳ್ಳುವ ಅಪಾಯ ಎದುರಿಸಬೇಕಾಗುತ್ತದೆ.
ಹೆಚ್ಚು ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುವ ವಿತರಕರಿಗೆ 5 ಸ್ಟಾರ್ ರೇಟಿಂಗ್ (star rating system) ನೀಡಲಾಗುತ್ತದೆ. ಅಂದರೆ ಅವರು ನೋಂದಾಯಿಸಿದ 48 ಗಂಟೆಯ ಒಳಗೆ ಕಡ್ಡಾಯವಾಗಿ ಸಿಲಿಂಡರ್ ತಲುಪಿಸಬೇಕಾಗುತ್ತದೆ. ಒಂದು ವೇಳೆ ನಿಗದಿಪಡಿಸಿದ ಸಮಯದೊಳಗೆ ವಿತರಣೆ ಮಾಡದಿದ್ದರೆ ಅಂತಹ ವಿತರಕರ ರೇಟಿಂಗ್ ಇಳಿಜಾರುತ್ತಾ ಹೋಗುತ್ತದೆ.
ಇದರಿಂದ ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಅನಿಲ ಪೂರೈಸುವುದಷ್ಟೇ ಅಲ್ಲದೆ, ತೈಲ ವಿತರಣಾ ಕಂಪನಿಗಳಾದ IOC (ಇಂಡೇನ್), BPCL ಮತ್ತು HPCL ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡುವಂತಾಗಿದೆ.
ಇದಕ್ಕೆ ಕಾರಣವೆಂದರೆ, ಮೊಬೈಲ್ ನಂಬರ್ ಪೋರ್ಟೆಬೆಲಿಟಿಯಂತೆಯೇ, ಅನಿಲ ಮಾರಾಟ ಕಂಪನಿಗಳ ಡೀಲರುಗಳನ್ನೂ ಬದಲಾಯಿಸಲು ಸರಕಾರ ಅವಕಾಶ ಕಲ್ಪಿಸಿದೆ. ಹೀಗಾಗಿ ಸರಿಯಾದ ಸೇವೆ ಸಲ್ಲಿಸದಿದ್ದಲ್ಲಿ ಗ್ರಾಹಕರನ್ನು ಆ ಡೀಲರುಗಳು ಕಳೆದುಕೊಳ್ಳುತ್ತಾರೆ ಮತ್ತು ಅತ್ಯುತ್ತಮ ರೇಟಿಂಗ್ ಪಡೆದ ವಿತರಕರಿಗೆ ಹೆಚ್ಚುವರಿ ಗ್ರಾಹಕರು ದೊರೆಯಲಿದ್ದಾರೆ. ಈ ಪೋರ್ಟೆಬಿಲಿಟಿ ವ್ಯವಸ್ಥೆ ಈಗ 15 ಪ್ರಮುಖ ನಗರಗಳಲ್ಲಿದೆ. ಮುಂದಿನ ವರ್ಷ ಇದನ್ನು ದೇಶಾದ್ಯಂತ ವಿಸ್ತರಿಸಲಾಗುವುದು.
'ಒಂದು ವೇಳೆ ವಿತರಕರು 8 ದಿನಗಳೊಳಗೆ ವಿತರಿಸದಿದ್ದರೆ ಮತ್ತು ಕನಿಷ್ಠ ರೇಟಿಂಗ್ ಕಂಡುಬಂದಲ್ಲಿ ಅವರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಅವರ ಡೀಲರ್ ಶಿಪ್ ಸಹ ರದ್ದುಗೊಳ್ಳಬಹುದು' ಎಂದು BPCL ನಿರ್ದೇಶಕ (ಮಾರುಕಟ್ಟೆ) ಕೆಕೆ ಗುಪ್ತಾ ಅವರು Times of India ಪತ್ರಿಕೆಗೆ ತಿಳಿಸಿದ್ದಾರೆ.












Click it and Unblock the Notifications