Breaking: ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್‌ಗೆ ಜೀವ ಬೆದರಿಕೆ
ಮುಂಬೈ, ಜುಲೈ 25: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಬಂದಿದೆ. ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ನಟಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ಮಾಲ್ಡೀವ್ಸ್‌ನಲ್ಲಿದ್ದರು. ತಮ್ಮ ರಜೆ ದಿನಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಏನು ಬೆದರಿಕೆಗಳು ಬಂದಿವೆ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.
ಆರೋಪದ ಹಿನ್ನೆಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506-II (ಕ್ರಿಮಿನಲ್ ಬೆದರಿಕೆ) ಮತ್ತು 354-ಡಿ (ಹಿಂಬಾಲಿಸುವಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದುವರೆಗೆ ಯಾವುದೇ ಬಂಧನವಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚೆಗೆ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೂ ಪತ್ರದ ರೂಪದಲ್ಲಿ ಬೆದರಿಕೆಗಳು ಬಂದಿದ್ದವು. ಮೇ ತಿಂಗಳಲ್ಲಿ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರಂತೆಯೇ ತಂದೆ-ಮಗ ಜೋಡಿಯನ್ನು ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಘಟನೆಯ ನಂತರ ಸಲ್ಮಾನ್ ಮತ್ತು ಅವರ ಕುಟುಂಬದ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಟ ಸಲ್ಮಾನ್ ಶಸ್ತ್ರಾಸ್ತ್ರ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರಿಗೂ ಪತ್ರದ ಮೂಲಕ ಜೀವ ಬೆದರಿಕೆ ಬಂದಿದ್ದು, ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮುಂಬೈ ಪೊಲೀಸರ ಪ್ರಕಾರ, ಪತ್ರವನ್ನು ವರ್ಸೋವಾದಲ್ಲಿರುವ ನಟಿಯ ನಿವಾಸಕ್ಕೆ ಕಳುಹಿಸಲಾಗಿದೆ. ಪತ್ರದಲ್ಲಿ ವೀರ ಸಾವರ್ಕರ್ ಅವರ ಅವಮಾನವನ್ನು ದೇಶದ ಯುವಕರು ಸಹಿಸುವುದಿಲ್ಲ ಎಂದು ಉಲ್ಲೇಖಿಸಲಾಗಿದ್ದು, ಈ ದೇಶದ ಯುವಕರು ಎಂದು ಸಹಿ ಮಾಡಲಾಗಿತ್ತು. ಈ ಕುರಿತು ಸ್ವರಾ ಭಾಸ್ಕರ್ ಹತ್ತಿರದ ವರ್ಸೋವಾ ಪೊಲೀಸ್ ಠಾಣೆಗೆ ತಲುಪಿ ದೂರು ದಾಖಲಿಸಿದ್ದಾರೆ.












Click it and Unblock the Notifications