92 ವರ್ಷಗಳ ಸೇವೆ ಪೂರ್ಣಗೊಳಿಸಿದ ಭಾರತದ ಮೊದಲ ಡಿಲಕ್ಸ್ ರೈಲು
ಮುಂಬೈ ಜೂನ್ 2: ಮಹಾರಾಷ್ಟ್ರದ ಎರಡು ಪ್ರಮುಖ ನಗರಗಳಾದ ಪುಣೆ ಮತ್ತು ಮುಂಬೈ ನಗರವನ್ನು ಸಂಪರ್ಕಿಸುವ ಭಾರತದ ಮೊದಲ ಡಿಲಕ್ಸ್ ರೈಲು-ಡೆಕ್ಕನ್ ಕ್ವೀನ್ ಎಕ್ಸ್ ಪ್ರೆಸ್ ರೈಲು ಬುಧವಾರ 92 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದೆ.
"ಭಾರತೀಯ ರೈಲ್ವೆಯಲ್ಲಿ ರೆಸ್ಟೋರೆಂಟ್ ಬೋಗಿ ಹೊಂದಿರುವ ಏಕೈಕ ರೈಲು ಇದಾಗಿದೆ. ಇದೇ ಜೂನ್ 22ರಿಂದ ಎಲ್ಎಚ್ ಬಿ ಕೋಚ್ ಗಳೊಂದಿಗೆ ಸಂಚರಿಸಲಿದೆ,'' ಎಂದು ಸೆಂಟ್ರಲ್ ರೈಲ್ವೆಯ ಜನರಲ್ ಮ್ಯಾನೇಜರ್ ಅನಿಲ್ ಕುಮಾರ್ ಲಾಹೋಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
1930ರ ಜೂನ್ 1ರಂದು ಮಹಾರಾಷ್ಟ್ರದ ಪುಣೆ ಮತ್ತು ಮುಂಬೈನ ಎರಡು ನಗರಗಳ ನಡುವೆ ಡೆಕ್ಕನ್ ಕ್ವೀನ್ ಎಕ್ಸ್ ಪ್ರೆಸ್ ರೈಲನ್ನು ಪರಿಚಯಿಸಲಾಯಿತು. ಇದು ಆ ಕಾಲದ ಗ್ರೇಟ್ ಇಂಡಿಯನ್ ಪೆನಿನ್ಸುಲಾ ರೈಲ್ವೆ ಇತಿಹಾಸದಲ್ಲೇ ಪ್ರಮುಖ ಹೆಗ್ಗುರುತಾಗಿದೆ. ಈಗ ಇದು ಸೆಂಟ್ರಲ್ ರೈಲ್ವೆಯ ಪ್ರಮುಖ ರೈಲುಗಳಲ್ಲಿ ಒಂದೆನಿಸಿದೆ.

ಪುಣೆ ಮತ್ತು ಮುಂಬೈ ನಗರಗಳಿಗೆ ಸಂಪರ್ಕ
ಈ ಪ್ರದೇಶದ ಎರಡು ಪ್ರಮುಖ ನಗರಗಳಿಗೆ ಸೇವೆ ಸಲ್ಲಿಸಲು ರೈಲ್ವೆ ಇಲಾಖೆಯಲ್ಲಿ ಪರಿಚಯಿಸಲಾದ ಮೊದಲ ಡೀಲಕ್ಸ್ ರೈಲು ಇದಾಗಿದೆ. ಅಲ್ಲದೇ ಪುಣೆಗೆ ಸೂಕ್ತವಾಗಿ ಇದರ ಹೆಸರಿಡಲಾಯಿತು. ರೈಲನ್ನು ಡೆಕ್ಕನ್ ಕ್ವೀನ್ (ದಕ್ಕನ್ ಕೀ ರಾಣಿ) ಎಂದೂ ಕರೆಯುತ್ತಾರೆ.

ಇಂಗ್ಲೆಂಡ್ ನಲ್ಲಿ ಅಂಡರ್ ಫ್ರೇಮ್ ನಿರ್ಮಾಣ
ಆರಂಭದಲ್ಲಿ ರೈಲನ್ನು ಏಳು ಬೋಗಿಗಳ ಎರಡು ರೇಕ್ ಗಳೊಂದಿಗೆ ಪರಿಚಯಿಸಲಾಯಿತು. ಪ್ರತಿಯೊಂದು ಬೋಗಿಯನ್ನು ಸಿಲ್ವರ್ ಬಣ್ಣದೊಂದಿಗೆ ಕಡುಗೆಂಪು ಮೋಲ್ಡಿಂಗಳಿಂದ ಹಾಗೂ ಉಳಿದವುಗಳನ್ನು ನೀಲಿ ಬಣ್ಣದಿಂದ ಚಿನ್ನದ ಬಣ್ಣದ ಗೆರೆಗಳೊಂದಿಗೆ ಚಿತ್ರಿಸಲಾಗಿದೆ. ಮೂಲ ರೇಕ್ ಗಳ ಬೋಗಿಗಳ ಅಂಡರ್ ಫ್ರೇಮ್ ಗಳನ್ನು ಇಂಗ್ಲೆಂಡ್ ನಲ್ಲಿ ನಿರ್ಮಿಸಲಾಗಿದೆ. ಬೋಗಿಗಳನ್ನು ಜಿಐಪಿ ರೈಲ್ವೆಯ ಮಾಟುಂಗಾ ಕಾರ್ಯಾಗಾರದಲ್ಲಿ ನಿರ್ಮಿಸಲಾಗಿದೆ.

ಪ್ರಯಾಣಿಕರಿಗೆ ಪ್ರಥಮ ದರ್ಜೆ ಸೌಕರ್ಯ
ಡೆಕ್ಕನ್ ಕ್ವೀನ್ ಎಕ್ಸ್ ಪ್ರೆಸ್ ರೈಲು ಆರಂಭದಲ್ಲಿ ಪ್ರಥಮ ದರ್ಜೆ ಮತ್ತು ಎರಡನೇ ದರ್ಜೆಯ ಸೌಕರ್ಯಗಳನ್ನು ಹೊಂದಿತ್ತು. 1949ರ ಜನವರಿ 1 ರಂದು ಪ್ರಥಮ ದರ್ಜೆ ಬೋಗಿಗಳನ್ನು ರದ್ದುಗೊಳಿಸಲಾಯಿತು. ಹಾಗೂ ಎರಡನೇ ದರ್ಜೆ ಬೋಗಿಗಳನ್ನು ಪ್ರಥಮ ದರ್ಜೆ ಬೋಗಿಗಳನ್ನಾಗಿ ಮರುವಿನ್ಯಾಸಗೊಳಿಸಲಾಯಿತು. ಇದು 1955ರ ಜೂನ್ ವರೆಗೆ ಮುಂದುವರಿಯಿತು. ನಂತರ ಮೂರನೇ ದರ್ಜೆ ಬೋಗಿಗಳನ್ನು ಪರಿಚಯಿಸಲಾಯಿತು. 1974ರ ಏಪ್ರಿಲ್ ನಂತರ ಈ ಮೂರನೇ ದರ್ಜೆ ಬೋಗಿಗಳನ್ನು ಎರಡನೇ ದರ್ಜೆ ಬೋಗಿಗಳನ್ನಾಗಿ ಮರುವಿನ್ಯಾಸಗೊಳಿಸಲಾಯಿತು.

ಸುಧಾರಿತ ವಿನ್ಯಾಸದ ಬೋಗಿಗಳ ನಿರ್ಮಾಣ
ಮೂಲ ರೇಕ್ ಗಳ ಕೋಚ್ ಗಳನ್ನು 1966ರಲ್ಲಿ ಪೆರೆಂಬೂರ್ ನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿಸಿದ ಆಂಟಿ ಟೆಲಿಸ್ಕೋಪಿಕ್ ಸ್ಟೀಲ್ ಬಾಡಿಡ್ ಕೋಚ್ ಗಳೊಂದಿಗೆ ಬದಲಾಯಿಸಲಾಯಿತು. ಈ ವೇಳೆ ಉತ್ತಮ ಪ್ರಯಾಣದ ಅನುಭವಕ್ಕಾಗಿ ಒಳವಿನ್ಯಾಸದ ಪೀಠೋಪಕರಣಗಳು, ಫಿಟ್ಟಿಂಗ್ ಗಳಲ್ಲಿ ಸುಧಾರಣೆಯೊಂದಿಗೆ ಸುಧಾರಿತ ವಿನ್ಯಾಸದ ಬೋಗಿಗಳನ್ನು ನಿರ್ಮಿಸಲಾಯಿತು.

ವಿವಿಧ ಸುಧಾರಣೆಗಳಿಗೆ ಸಾಕ್ಷಿ
ಪ್ರಾರಂಭದಿಂದಲೂ ಡೆಕ್ಕನ್ ಕ್ವೀನ್ ಎಕ್ಸ್ ಪ್ರೆಸ್ ರೈಲು ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೌಕರ್ಯಗಳನ್ನು ಒದಗಿಸಯತ್ತಿದೆ. ಜತೆಗೆ ಈ ರೈಲು, ಭಾರತದಲ್ಲಿ ಮೊದಲ ಬಾರಿಗೆ ರೋಲರ್ ಬೇರಿಂಗ್ ಗಳೊಂದಿಗಿನ ಕೋಚ್ ಗಳ ಪರಿಚಯ, ಅಲ್ಲದೇ 110 ವೋಲ್ಟ್ ಗಳ ವ್ಯವಸ್ಥೆ ಹೊಂದಿರುವ ಸೆಲ್ಫ್ ಜನರೇಟಿಂಗ್ ಕೋಚ್ ಗಳೊಂದಿಗೆ ಬದಲಾಯಿಸುವುದು ಸೇರಿದಂತೆ ವಿವಿಧ ಸುಧಾರಣೆಗಳಿಗೆ ಸಾಕ್ಷಿಯಾಗಿದೆ. ಅಲ್ಲದೇ ಪ್ರಯಾಣಿಕರಿಗೆ ಹೆಚ್ಚುವರಿಗೆ ಸೌಕರ್ಯಗಳೊಂದಿಗೆ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಬೋಗಿಗಳ ಪರಿಚಯಕ್ಕೂ ಕೂಡ ಡೆಕ್ಕನ್ ಕ್ವೀನ್ ಎಕ್ಸ್ ಪ್ರೆಸ್ ರೈಲು ಸಾಕ್ಷಿಯಾಗಿ ನಿಂತಿದೆ.












Click it and Unblock the Notifications