'ಮೋದಿಯನ್ನು ಹೊಡೆದುರುಳಿಸಬಲ್ಲೆ': ವಿವಾದ ಸೃಷ್ಟಿಸಿದ 'ಕೈ' ನಾಯಕರ ವಿಡಿಯೋ
ಮುಂಬೈ ಜನವರಿ 18: ಒಂದೆಡೆ ಪಂಚರಾಜ್ಯ ಚುನಾವಣೆಗಳ ಸಿದ್ದತೆ ಜೋರಾಗಿದೆ. ಶತಾಯಗತಾಯ ಈ ಬಾರಿ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಪಣವನ್ನು ಬಿಜೆಪಿ ತೊಟ್ಟಿದೆ. ಮತ್ತೊಂದೆಡೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರ ವಿಡಿಯೋ ವೈರಲ್ ಆಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ನಾನಾ ಪಟೋಲೆ ಅವರು 'ಮೋದಿಯನ್ನು ಸೋಲಿಸಬಲ್ಲೆ, ಹೊಡೆದುರುಳಿಸಬಲ್ಲೆ' ಎಂಬರ್ಥದಲ್ಲಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ವಿಡಿಯೊ ಹಂಚಿಕೊಂಡಿದ್ದಾರೆ. ಪಟೋಲೆ ಭಂಡಾರಾ ಜಿಲ್ಲೆಯ ಗ್ರಾಮಸ್ಥರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. "ನಾನು ಮೋದಿಯನ್ನು ಸೋಲಿಸಬಲ್ಲೆ, ನಾನು ಅವರನ್ನು ಕೆಟ್ಟದಾಗಿ ಬೈಯಬಲ್ಲೆ. ಅದಕ್ಕಾಗಿಯೇ ಅವರು ನನ್ನ ವಿರುದ್ಧ ಪ್ರಚಾರಕ್ಕೆ ಬಂದಿದ್ದರು. ತನ್ನ ಕ್ಷೇತ್ರದಲ್ಲಿ ಮೋದಿ ಎಂಬ ಸ್ಥಳೀಯ ಗೂಂಡಾ ಬಗ್ಗೆ ನಾಗರಿಕರು ತನಗೆ ದೂರು ನೀಡಿದ್ದಾರೆ ಎಂದು ಪಟೋಲೆ ಹೇಳಿದ್ದಾರೆ. ಅವರು ಗ್ರಾಮಸ್ಥರೊಂದಿಗೆ "ಕೆಟ್ಟ ರೀತಿಯಲ್ಲಿ" ಮಾತನಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಪಟೋಲೆ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
"ನಾನು ಮಾತನಾಡಿದ್ದು ನಿಜ. ಆದರೆ ನಾನು ಪ್ರಧಾನಿಯ ಬಗ್ಗೆ ಮಾತನಾಡುತ್ತಿಲ್ಲ. ಮೋದಿ ಎಂಬ ಸ್ಥಳೀಯ ಗೂಂಡಾ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸುತ್ತೇನೆ" ಎಂದು ಪಟೋಲೆ ಪ್ರತಿಪಾದಿಸಿದರು.
ಪಂಜಾಬ್ ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿಮೀ ದೂರದಲ್ಲಿ, ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಫ್ಲೈಓವರ್ ಅನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿರುವುದು ಕಂಡುಬಂದಿದೆ. ಹೀಗಾಗಿ ಪ್ರಧಾನಿ 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು. ಇದು ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ಲೈಓವರ್‌ನಲ್ಲಿ ಸಿಲುಕಿದ್ದರು, ಬಳಿಕ ಬಟಿಂಡಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ಏರ್‌ಪೋರ್ಟ್‌ಗೆ ತೆರಳಿದರು. ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ಇರುವುದೇ ಈ ವೈಫಲ್ಯಕ್ಕೆ ಕಾರಣ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳದಲ್ಲಿ ಹೆಲಿಕಾಪ್ಟರ್‌ನಲ್ಲಿ ಮೋದಿ ಆಗಮಿಸಬೇಕಿತ್ತು. ಆದರೆ ವಾತಾವರಣ ಸರಿ ಇಲ್ಲದ ಕಾರಣ ಅನಿವಾರ್ಯವಾಗಿ ಕಾರಿನಲ್ಲಿ ಬರಬೇಕಾಯಿತು. ಮೆಮೋರಿಯಲ್‌ನಿಂದ 30 ಕಿ.ಮೀ ದೂರದಲ್ಲಿ ಫ್ಲೈಓವರ್ ಮೇಲೆ ಕಾನ್‌ವಾಯ್ ಬರುತ್ತಿದ್ದಂತೆ ಪ್ರತಿಭಟನಾಕಾರರು ಸುತ್ತುವರೆದರು. ಮೋದಿ ಬರುವ ಕುರಿತು ಪಂಜಾಬ್ ಸರ್ಕಾರಕ್ಕೆ ಮೊದಲೇ ತಿಳಿಸಲಾಗಿತ್ತು. ಆದರೂ ಈ ರೀತಿ ಘಟನೆ ನಡೆದಿದೆ, ಈ ಕುರಿತು ಗೃಹ ಸಚಿವಾಲಯ ಪಂಜಾಬ್ ಸರ್ಕಾರದ ಬಳಿ ವರದಿ ಕೇಳಿದೆ. ಹವಾಮಾನ ಸ್ಥಿತಿ ಸುಧಾರಿಸದ ಕಾರಣ, ಅವರು ರಸ್ತೆ ಮೂಲಕವೇ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದರು, ಅದಕ್ಕೆ ಸುಮಾರು 2 ಗಂಟೆಗೂ ಅಧಿಕ ಸಮಯ ಹಿಡಿಯುತ್ತಿತ್ತು. ಪಂಜಾಬ್ ಪೊಲೀಸ್ ಡಿಜಿಪಿ ಅವರಿಂದ ಅಗತ್ಯ ಭದ್ರತಾ ಏರ್ಪಾಡುಗಳನ್ನು ಖಾತ್ರಿಪಡಿಸಿಕೊಂಡ ನಂತರ ಅವರು ರಸ್ತೆ ಮೂಲಕ ಪ್ರಯಾಣ ಆರಂಭಿಸಿದರು.