ಐಪಿಎಲ್ ಟೂರ್ನಿ ಮಧ್ಯದಲ್ಲೇ ಆರ್‌ಸಿಬಿಗೆ ಬಿಗ್ ಶಾಕ್: ಇಂಗ್ಲೆಂಡ್‌ಗೆ ಹಾರಿದ ಕೊಹ್ಲಿ ಜೊತೆ ಕಣಕ್ಕಿಳಿಯುತ್ತಿದ್ದ ಸ್ಟಾರ್ ಆಟಗಾರ
RCB IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯೂ ಐಪಿಎಲ್ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿದೆ. ಇದುವರೆಗೂ ಆಡಿದ 9 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿರುವ ಆರ್‌ಸಿಬಿ ಸದ್ಯ ಅಂಕಪಟ್ಟಿಯಲ್ಲಿ 12 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಪ್ಲೇಆಫ್ ಪ್ರವೇಶ ಪಡೆಯುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಈ ನಡುವೆಯೇ ಸ್ಟಾರ್ ಆಟಗಾರ ಫಿಲ್ ಸಾಲ್ಸ್ ತಮ್ಮ ದೇಶಕ್ಕೆ ವಾಪಸಾಗಿದ್ದು, ತಂಡಕ್ಕೆ ದೊಡ್ಡ ದೊಡ್ಡ ಆಘಾತ ಆದಂತಾಗಿದೆ.
ಆರ್‌ಸಿಬಿ ತಂಡವು ಕಳೆದ ಬಾರಿಯಂತೆ ಈ ಬಾರಿಯೂ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಆದರೆ ಇದೀಗ ಸ್ಟಾರ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಗಾಯದ ಕಾರಣ ತವರಿಗೆ ಮರಳಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಆದರೂ ಸಮತೋಲಿತ ಆಟಗಾರರ ಬಲದೊಂದಿಗೆ ಆರ್‌ಸಿಬಿ ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವ ಭರವಸೆಯಲ್ಲಿದೆ.

ಇಂಗ್ಲೆಂಡ್‌ಗೆ ವಾಪಸಾದ ಫಿಲ್ ಸಾಲ್ಟ್
ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಗಾಯದ ಸಮಸ್ಯೆಯಿಂದಾಗಿ ಸೀಸನ್ ಅರ್ಧದಲ್ಲೇ ಇಂಗ್ಲೆಂಡ್‌ಗೆ ಹೋಗಿದ್ದಾರೆ. ಕಳೆದ ತಿಂಗಳು ಪಂದ್ಯವೊಂದರ ಸಮಯದಲ್ಲಿ ಅವರ ಬೆರಳಿಗೆ ಗಾಯವಾಗಿತ್ತು. ಆ ಗಾಯದ ಗಂಭೀರತೆಯನ್ನು ಪರೀಕ್ಷಿಸಲು ಮತ್ತು ಸ್ಕ್ಯಾನಿಂಗ್‌ಗಾಗಿ ಅವರು ತವರಿಗೆ ವಾಪಸ್ ಹೋಗಿದ್ದಾರೆ. ಟೂರ್ನಿಯು ನಿರ್ಣಾಯಕ ಘಟ್ಟಕ್ಕೆ ತಲುಪಿರುವ ಈ ಸಮಯದಲ್ಲಿ ಫಾರ್ಮ್‌ನಲ್ಲಿದ್ದ ಸಾಲ್ಟ್ ಅಲಭ್ಯರಾಗಿರುವುದು ಆರ್‌ಸಿಬಿ ತಂಡದ ಬ್ಯಾಟಿಂಗ್ ಬಲಕ್ಕೆ ದೊಡ್ಡ ಹೊಡೆತ ಬಿದ್ದಂತಾಗುದೆ.
ಸಾಲ್ಟ್ ಸ್ಥಾನ ತುಂಬಲಿರುವ ಬೆಥೆಲ್
ಕಳೆದ ಸೀಸನ್‌ನ ಚಾಂಪಿಯನ್ ಆಗಿರುವ ಆರ್‌ಸಿಬಿ ಈ ಬಾರಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ತವಕದಲ್ಲಿದೆ. ಇಂತಹ ಸಮಯದಲ್ಲಿ ಆರಂಭಿಕ ಆಟಗಾರನ ಗಾಯ ತಂಡದ ಮ್ಯಾನೇಜ್‌ಮೆಂಟ್‌ಗೆ ತಲೆನೋವು ತಂದಿದೆ. ಆರಂಭದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಜೊತೆ ವಿಕೆಟ್ ಕಾಪಾಡಿಕೊಂಡು ಹೋಗುವಂತಹ ಸಾಮಾರ್ಥ್ಯವನ್ನು ಕೂಡ ಹೊಂದಿದ್ದರು. ಇದೀಗ ಅವರ ಸ್ಥಾನದಲ್ಲಿ ಜೇಕಬ್ ಬೆಥೆಲ್ ಇದ್ದಾರೆ. ಕಳೆದ ಎರಡು ಪಂದ್ಯಗಳಿಂದ ಇವರೇ ಇದ್ದು, ಸಾಲ್ಟ್ ಬರುವವರೆಗೂ ಇವರೇ ಕೊಹ್ಲಿ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾಹಿತಿಯಿದೆ.
ಬೆರಳಿನ ಗಾಯದ ಕಾರಣದಿಂದಾಗಿ ಫಿಲ್ ಸಾಲ್ಟ್ ಅವರಿಗೆ ಕಳೆದ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಸಾಲ್ಟ್ ಅಲಭ್ಯತೆಯಿಂದಾಗಿ ಅವರ ಇಂಗ್ಲೆಂಡ್ ತಂಡದ ಸಹ ಆಟಗಾರ ಜೇಕಬ್ ಬೆಥೆಲ್ ಅವರಿಗೆ ಆರಂಭಿಕ ಸ್ಥಾನದಲ್ಲಿ ಆಡುವ ಅವಕಾಶ ದೊರೆತಿದೆ.
ಡಿಸಿ ವಿರುದ್ಧದ ಪಂದ್ಯದಲ್ಲಿ ಸಾಲ್ಟ್‌ಗೆ ಗಾಯ
ಏಪ್ರಿಲ್ 18ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬೌಂಡರಿ ತಡೆಯುವ ವೇಳೆ ಫಿಲ್ ಸಾಲ್ಟ್ ತಮ್ಮ ಎಡಗೈ ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದರು. ಆ ಪಂದ್ಯದಲ್ಲಿ ಆರ್‌ಸಿಬಿ ಸೋಲನುಭವಿಸಿತ್ತು. ಇನ್ನೂ ವರದಿ ಪ್ರಕಾರ, "ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜೊತೆ ಕೇಂದ್ರ ಒಪ್ಪಂದ ಹೊಂದಿರುವ ಫಿಲ್ ಸಾಲ್ಟ್, ಇಂಗ್ಲೆಂಡ್ ಕ್ರಿಕೆಟ್ ಮ್ಯಾನೇಜ್‌ಮೆಂಟ್‌ನ ಒಪ್ಪಿಗೆ ಮೇರೆಗೆ ತಾಯ್ನಾಡಿಗೆ ಮರಳಿದ್ದಾರೆ ಮತ್ತು ಅಲ್ಲಿ ಅವರ ಬೆರಳಿನ ಸ್ಕ್ಯಾನಿಂಗ್ ಪ್ರಕ್ರಿಯೆಗಳು ನಡೆದಿವೆ," ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಫಿಲ್ ಸಾಲ್ಟ್ ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ ಆರ್‌ಸಿಬಿ ಗೂಡು ಸೇರಲಿದ್ದಾರೆ. ಲೀಗ್‌ನ ನಿರ್ಣಾಯಕ ಹಂತದ ಪಂದ್ಯಗಳ ವೇಳೆಗೆ ಲಭ್ಯವಾಗುವಂತೆ ಅವರು ಇದೇ ತಿಂಗಳ ಅಂತ್ಯದ ವೇಳೆಗೆ ಭಾರತಕ್ಕೆ ಮರಳುವ ಸಾಧ್ಯತೆಯಿದೆ. ಜೇಕಬ್ ಬೆಥೆಲ್ ಅವರ ಸ್ಥಾನವನ್ನು ತುಂಬಿದ್ದರೂ ಸಾಲ್ಟ್ ಅನುಪಸ್ಥಿತಿ ತಂಡಕ್ಕೆ ಎದ್ದು ಕಾಣುತ್ತಿದೆ. ಅವರು ಈ ಸೀಸನ್‌ನಲ್ಲಿ ಆಡಿದ ಕೇವಲ 6 ಇನ್ನಿಂಗ್ಸ್‌ಗಳಲ್ಲಿ 168.33 ರ ಸ್ಟ್ರೈಕ್ ರೇಟ್‌ನಲ್ಲಿ 202 ರನ್ ಕಲೆಹಾಕಿದ್ದಾರೆ. ಹಲವು ಪಂದ್ಯಗಳನ್ನು ತಪ್ಪಿಸಿಕೊಂಡ ಹೊರತಾಗಿಯೂ ಅವರು ಆರ್‌ಸಿಬಿ ಪರ ಈ ಆವೃತ್ತಿಯ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಸೋಲನುಭವಿಸಿರುವ ಆರ್‌ಸಿಬಿ ತಂಡ ಮುಂಬರುವ ಗುರುವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಪ್ರಸ್ತುತ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್‌ಗಿಂತ ಆರ್‌ಸಿಬಿ ಕೇವಲ ಒಂದು ಅಂಕ ಹಿಂದೆಯಿದೆ. ಆರ್‌ಸಿಬಿ ಹೊರತಾಗಿ ಇನ್ನೂ ಮೂರು ತಂಡಗಳು ತಲಾ 12 ಅಂಕಗಳನ್ನು ಹೊಂದಿದ್ದು, ಪ್ಲೇ ಆಫ್ ಹಾದಿ ಅತ್ಯಂತ ಕಠಿಣ ಮತ್ತು ಕುತೂಹಲಕಾರಿಯಾಗಿದೆ.












Click it and Unblock the Notifications