ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಮತ್ತೆ ಸಸ್ಪೆಂಡ್
ಮುಂಬೈ, ಜು.03: ಕರ್ನಾಟಕದ ಮೂಲದ ಎನ್ ಕೌಂಟರ್ ಸ್ಪೆಷಲಿಸ್ಟ್ ಸಬ್ ಇನ್ಸ್ ಪೆಕ್ಟರ್ ದಯಾನಾಯಕ್ ಅವರನ್ನು ಮಹಾರಾಷ್ಟ್ರ ಪೊಲೀಸ್ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ದಯಾನಾಯಕ್ ಅವರು ಈ ಹಿಂದೆ ಕೂಡಾ ಅಮಾನತುಗೊಂಡಿದ್ದರು. 2012ರಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದ್ದರು. ಆಂತರಿಕ ತನಿಖೆ ಜಾರಿಯಲ್ಲಿದ್ದರಿಂದ ಕಳೆದ ವರ್ಷ ನಾಗಪುರಕ್ಕೆ ಅವರನ್ನು ವರ್ಗಾಯಿಸಲಾಗಿತ್ತು. ಅದರೆ, ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.ಇದೇ ಕಾರಣಕ್ಕೆ ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂಬ ಸುದ್ದಿಯಿದೆ. ಅದರೆ, ಮಹಾರಾಷ್ಟ್ರ ಪೊಲೀಸರು ಕಾರಣ ಸ್ಪಷ್ಟಪಡಿಸಿಲ್ಲ.
1995 ಐಪಿಎಸ್ ಬ್ಯಾಚಿನ ಅಧಿಕಾರಿ ದಯಾನಾಯಕ್ ಅವರನ್ನು 2006ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಬಂಧಿಸಿದ ನಂತರ ಸುಮಾರು ಆರು ವರ್ಷಗಳ ಕಾಲ ಸೇವೆಯಿಂದ ಹೊರಗುಳಿಯಬೇಕಾಗಿತ್ತು. ಅಗತ್ಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ ಹೊರೆಸಿ ಕೇತಾನ್ ತಿರೋಡ್ಕರ್ ಎಂಬ ಪತ್ರಕರ್ತ ದೂರು ಸಲ್ಲಿಸಿದ್ದರು.

ದಯಾನಾಯಕ್ ವಿರುದ್ದ Maharashtra Control of Organised Crime Act ಮೋಕಾ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, 2010ರಲ್ಲಿ ನಾಯಕ್ ವಿರುದ್ಧ ಇದ್ದ ಎಲ್ಲಾ ಆರೋಪಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿ ಕೇಸಿನಿಂದ ಮುಕ್ತಿ ನೀಡಿತ್ತು. [ಸಂತೋಷ್ 'ಎನ್‌ಕೌಂಟರ್'ನಲ್ಲಿ ಸಿಕ್ಕಿಬಿದ್ದ ದಯಾನಾಯಕ್]
2012ರಲ್ಲಿ ಮತ್ತೊಮ್ಮೆ ಕರ್ತವ್ಯದ ಕರೆ ಬಂದರೂ ಅಧಿಕಾರ ವಹಿಸಿಕೊಂಡಿರಲಿಲ್ಲ. ನಾಯಕ್ ಅವರು ವಿನೋದ್ ಮಟ್ಕರ್, ರಫೀಕ್ ಡಬ್ಬಾ, ಸಾಧಿಕ್ ಕಾಲಿಯಾ, ಲಷ್ಕರ್ ಉಗ್ರರು ಸೇರಿದಂತೆ 80ಕ್ಕೂ ಅಧಿಕ ಕ್ರಿಮಿನಲ್ ಗಳನ್ನು ಎನ್ ಕೌಂಟರ್ ಮೂಲಕ ಹತ್ಯೆಗೈದಿರುವ ರೆಕಾರ್ಡ್ ಹೊಂದಿದ್ದಾರೆ.
ಅಮಾನತು ಆದೇಶ ನನ್ನ ಕೈ ಸೇರಿಲ್ಲ ಎಂದು ದಯಾನಾಯಕ್ ಅವರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ. (ಪಿಟಿಐ)












Click it and Unblock the Notifications