ಸಂತೋಷ್ 'ಎನ್‌ಕೌಂಟರ್'ನಲ್ಲಿ ಸಿಕ್ಕಿಬಿದ್ದ ದಯಾನಾಯಕ್

ಉದ್ಯಮಿಯೊಬ್ಬರ ಪರವಾಗಿ ಅವರು ಕರ್ನಾಟಕದ ಹಿರಿಯ ಅಧಿಕಾರಿ ಮೇಲೆ ಭಾರೀ ಒತ್ತಡ ಹೇರಿದ್ದರೆಂಬ ಆರೋಪ ಕೇಳಿಬಂದಿದೆ. ಇಂತಹದ್ದೊಂದು ಆಘಾತಕಾರಿ ಅಂಶ ಲೋಕಾಯುಕ್ತರು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿದೆ.
ವಿಶೇಷವೆಂದರೆ ದಯಾನಾಯಕ್ ಹೆಸರು ಕೇಳಿಬಂದಿರುವುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆರೋಪಿಯೆಂದು ಹೇಳಲಾಗಿರುವ ಜಂತಕಲ್ ಗಣಿ ಪ್ರಕರಣದಲ್ಲಿ. ಅಷ್ಟಕ್ಕೂ ದಯಾನಾಯಕ್ ಮೇಲೆ ಹೀಗೊಂದು ಆರೋಪವನ್ನು ಹೊರಿಸಿರುವುದು ಗಣಿ ಇಲಾಖೆಯ ಆಯುಕ್ತರು. ಅವರು ತಮ್ಮ ಟಿಪ್ಪಣಿಯಲ್ಲಿ ದಯಾನಾಯಕ್ ಹೆಸರನ್ನು ನೇರವಾಗಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಪ್ರಕರಣ ದಯಾ ಪಾಲಿಗೆ ಕಂಟಕಪ್ರಾಯವಾಗುವ ಸಾಧ್ಯತೆಯಿದೆ.
2007ರ ಆಗಸ್ಟ್ 23ರಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಗಣಿಗಾರಿಕೆ ಲೈಸೆನ್ಸ್ ಅನ್ನು ಒಂದೇ ದಿನ ಎರಡು ಬಾರಿ ನವೀಕರಣಗೊಳಿಸಲಾಗಿತ್ತು. ಆದರೆ ಹೀಗೆ ಗುತ್ತಿಗೆ ನವೀಕರಣ ಮಾಡುವಾಗ ಯಾವುದೇ ಲೀಸ್ ಡೀಡ್ ಮಾಡಿಕೊಂಡಿರಲಿಲ್ಲ. ಇದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿತ್ತು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಕಾರ್ಯಾಲಯ ಮತ್ತು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಗಣಿ ಇಲಾಖೆ ಆಯುಕ್ತರಿಗೆ ಪದೇ ಪದೇ ದೂರವಾಣಿ ಕರೆ ಮಾಡಿ ಅದಿರು ಸಾಗಿಸಲು ಪರವಾನಗಿ ನೀಡುವಂತೆ ಒತ್ತಡ ಹೇರಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಇದರ ಜೊತೆಜೊತೆಗೆ ಜಂತಕಲ್ ಗಣಿ ಕಂಪನಿ ಮಾಲೀಕರಾದ ಮುಂಬೈ ಮೂಲದ ದರ್ಶನ್ ಗೋಯಲ್, ವಿನೋದ್ ಗೋಯಲ್ ಹಾಗೂ ಅಮಾನತ್ತುಗೊಂಡಿದ್ದ ಮಹಾರಾಷ್ಟ್ರದ ಪೊಲೀಸ್ ಇನ್ಸ್‌ಪೆಕ್ಟರ್ ದಯಾನಾಯಕ್ ಕೂಡಾ ಗಣಿ ಇಲಾಖೆ ಆಯುಕ್ತರ ಮೇಲೇ ತಡೆಯಲಾರದಷ್ಟು ಒತ್ತಡ ಹೇರಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.












Click it and Unblock the Notifications