ಬಿಎಂಸಿಯಲ್ಲಿ ದೋಸ್ತಿಗಳ ತಿಕ್ಕಾಟ, ಪುಣೆ ಬಿಜೆಪಿ ವಶಕ್ಕೆ
ಏಷ್ಯಾದ ಅತ್ಯಂತ ದೊಡ್ಡ ಮತ್ತು ಶ್ರೀಮಂತ ಸ್ಥಳೀಯ ಸಂಸ್ಥೆಯಾಗಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ ಹಾಗೂ ಮಹಾರಾಷ್ಟ್ರದ ಇತರ 9 ಪೌರಾಡಳಿತ ಸಂಸ್ಥೆಗಗಳ ಚುನಾವಣಾ ಫಲಿತಾಂಶದ ಸಂಪೂರ್ಣ ಅಪ್ಡೇಟ್ ಇಲ್ಲಿದೆ.
ಮುಂಬೈ, ಫೆಬ್ರವರಿ 23: ಏಷ್ಯಾದ ಅತ್ಯಂತ ದೊಡ್ಡ ಮತ್ತು ಶ್ರೀಮಂತ ಸ್ಥಳೀಯ ಸಂಸ್ಥೆಯಾಗಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ ಹಾಗೂ ಮಹಾರಾಷ್ಟ್ರದ ಇತರ 9 ಪೌರಾಡಳಿತ ಸಂಸ್ಥೆಗಗಳ ಚುನಾವಣಾ ಫಲಿತಾಂಶದ ಸಂಪೂರ್ಣ ಅಪ್ಡೇಟ್ ಇಲ್ಲಿದೆ.
10 ನಗರ ಪಾಲಿಕೆಗಳು, 11 ಜಿಲ್ಲಾ ಪರಿಷತ್ ಮತ್ತು 118 ಪಂಚಾಯತ್ ಸಮಿತಿಗಳ 3210 ಸ್ಥಾನಗಳಿಗಾಗಿ ಸ್ಪರ್ಧಿಸಿದ್ದ 17,331 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮುಂಬೈನಲ್ಲಿ ದೋಸ್ತಿ ಕಳಚಿಕೊಂಡು ದುಷ್ಮನ್ ಗಳಾಗಿರುವ ಶಿವಸೇನಾ ಹಾಗೂ ಬಿಜೆಪಿ ಅಧಿಕಾರ ಸ್ಥಾಪನೆಗೆ ಮತ್ತೊಮ್ಮೆ ಕೈಜೋಡಿಸಬೇಕಾದ ಅನಿವಾರ್ಯ ಪ್ರಸಂಗ ಎದುರಾಗಿದೆ.

227 ಸದಸ್ಯ ಬಲದ ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ (ಬಿಎಂಪಿ) ನಿರೀಕ್ಷೆಯಂತೆ ಆರಂಭದಲ್ಲಿ ಶಿವಸೇನೆ ಪ್ರಾಬಲ್ಯ ಮೆರೆದರೂ ಸದ್ಯದ ಟ್ರೆಂಡ್ ನಂತೆ ಬಿಜೆಪಿ ಹಾಗೂ ಶಿವಸೇನೆ ಸಮಬಲ ಹೋರಾಟ ನಡೆಸಿವೆ.
ಅಧಿಕಾರ ಸ್ಥಾಪನೆಗೆ ಬೇಕಾದ 114 ಮ್ಯಾಜಿಕ್ ನಂಬರ್ ಸಾಧಿಸಲು ಎರಡು ಪಕ್ಷಗಳು ಸೋತಿವೆ. ಕಾಂಗ್ರೆಸ್ ಕೇವಲ 31 ಸ್ಥಾನ ಗಳಿಸಿ ಮುಖಭಂಗ ಅನುಭವಿಸಿದೆ.
162 ಸದಸ್ಯರಿರುವ ಪ್ರತಿಷ್ಠಿತ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ (ಪಿಎಂಸಿ) ಬಿಜೆಪಿ(77) ಪ್ರಾಬಲ್ಯ ಸಾಬೀತಾಗಿದೆ. ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್‍ಸಿಪಿ) (44) ಎರಡನೇ ಸ್ಥಾನದಲ್ಲಿದ್ದು, ಕಾಂಗ್ರೆಸ್ (16) ಮೂರನೇ ಸ್ಥಾನದೊಂದಿಗೆ ತೀವ್ರ ಹಿನ್ನಡೆ ಅನುಭವಿಸಿದೆ.
ಥಾಣೆ, ಉಲ್ಲಾಸ್ ನಗರ, ಪುಣೆ, ಪಿಂಪ್ರಿ-ಚಂಚವಾಡ, ಸೊಲ್ಲಾಪುರ, ನಾಸಿಕ್, ಅಕೋಲಾ, ಅಮರಾವತಿ, ನಾಗಪುರ ನಗರಪಾಲಿಕೆಗಳು ಹಾಗೂ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿಗಳಲ್ಲಿ ಹುಲಿ ಮತ್ತು ಕಮಲ ಚಿಹ್ನೆ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ.
ಬೆಟ್ಟಿಂಗ್ ದಂಧೆ: ಮುಂಬೈ ಚುನಾವಣೆ ಫಲಿತಾಂಶ ಮೇಲೆ ಬರೋಬ್ಬರಿ 3 ಸಾವಿರ ಕೋಟಿ ಅಕ್ರಮ ಬೆಟ್ಟಿಂಗ್ ನಡೆಯುತ್ತಿದೆ. ಶಿವಸೇನೆ ಮೇಲೆ 1 ರೂಪಾಯಿಗೆ 25 ಪೈಸೆ ಹಾಗೂ ಬಿಜೆಪಿ ಮೇಲೆ 1ರೂಪಾಯಿಗೆ 34 ಪೈಸೆ, ಕಾಂಗ್ರೆಸ್ ಮೇಲೆ 1ರೂ.ಗೆ 2.25 ರೂಪಾಯಿ ಹಾಗೂ ಎನ್‌ಸಿಪಿ ಮೇಲೆ 1 ರೂಪಾಯಿಗೆ 1.10 ರೂಪಾಯಿ ಬೆಟ್ಟಿಂಗ್ ನಡೆಯುತ್ತಿದೆ.












Click it and Unblock the Notifications