ಟಿಕೆಟ್ ಸಿಗದ ಸಿಟ್ಟಿಗೆ ಕಚೇರಿಯ 300 ಕುರ್ಚಿ ಹೊತ್ತೊಯ್ದ ಕಾಂಗ್ರೆಸ್ ಶಾಸಕ
ಔರಂಗಾಬಾದ್, ಮಾರ್ಚ್ 28: ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದೆ ಇದ್ದರೆ ಆಕಾಂಕ್ಷಿಗಳು ಪಕ್ಷದ ನಾಯಕರ ವಿರುದ್ಧ ಕೋಪಗೊಂಡು ಪಕ್ಷ ತ್ಯಜಿಸುವುದೋ ಅಥವಾ ಬಂಡಾಯ ಏಳುವುದೋ ಮುಂತಾದ ಚಟುವಟಿಕೆಗಳನ್ನು ನಡೆಸುತ್ತಾರೆ. ಆದರೆ, ಔರಂಗಾಬಾದ್‌ನ ಸಿಲ್ಲೋದ್ ಕ್ಷೇತ್ರದ ಕಾಂಗ್ರೆಸ್ ಶಾಸಕ ತೆಗೆದುಕೊಂಡು ತೀರ್ಮಾನ ನಗೆಯುಕ್ಕಿಸುವಂತಿದೆ.
ಔರಂಗಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ ಶಾಸಕ ಅಬ್ದುಲ್ ಸತ್ತಾರ್ ಎ ನಬಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಇದರಿಂದ ಕೋಪಗೊಂಡ ಅಬ್ದುಲ್ ಸತ್ತಾರ್ ಪಕ್ಷದ ಸ್ಥಳೀಯ ಕಚೇರಿಯಲ್ಲಿದ್ದ ಕುರ್ಚಿಗಳನ್ನೆಲ್ಲ ಹೊತ್ತೊಯ್ದಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶಗೊಂಡ ಸತ್ತಾರ್ ಮತ್ತವರ ಬೆಂಬಲಿಗರು ಪಕ್ಷದ ಸ್ಥಳೀಯ ಕಚೇರಿಯಲ್ಲಿದ್ದ ಸುಮಾರು 300 ಪ್ಲಾಸ್ಟಿಕ್ ಕುರ್ಚಿಗಳನ್ನು ಬೇರೆಡೆ ಸಾಗಿಸಿದ್ದಾರೆ. ಬಳಿಕ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.

ಈ ಘಟನೆಯನ್ನು ಸತ್ತಾರ್ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ಕುರ್ಚಿಗಳಿಗೆ ಸತ್ತಾರ್ ಅವರೇ ಹಣ ನೀಡಿದ್ದರು. ಹೀಗಾಗಿ ಅವು ಅವರಿಗೇ ಸೇರಿದ್ದು. ಅವರು ಈಗ ಪಕ್ಷವನ್ನು ತ್ಯಜಿಸಿರುವುದರಿಂದ ತಮ್ಮ ಕುರ್ಚಿಗಳನ್ನು ಇಲ್ಲಿಯೇ ಬಿಟ್ಟು ಹೋಗುವುದರಲ್ಲಿ ಅರ್ಥವಿಲ್ಲ. ಮಿಗಿಲಾಗಿ ಅವರಿಗೆ ಈ ಕುರ್ಚಿಗಳ ಅಗತ್ಯವಿದೆ. ಅವುಗಳನ್ನು ಅವರ ಖಾಸಗಿ ಕಚೇರಿಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಎನ್‌ಸಿಪಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ಎಂಎಲ್‌ಸಿ ಸುಭಾಷ್ ಜಂಬಾದ್ ಅವರನ್ನು ಔರಂಗಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಇದು ಪ್ರಬಲ ಆಕಾಂಕ್ಷಿಯಾಗಿದ್ದ ಸತ್ತಾರ್ ಅವರನ್ನು ಕೆರಳಿಸಿತ್ತು.
ಕಾಂಗ್ರೆಸ್ ತ್ಯಜಿಸಿದ ಬಳಿಕ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಇದರಿಂದ ಸತ್ತಾರ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಶಾಸಕನಾದ ತಮಗೆ ನಾಲ್ಕು ವರ್ಷ ಸಹಕಾರ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಲು ಕರೆ ಮಾಡಿದ್ದಾಗಿ ಸತ್ತಾರ್ ಸ್ಪಷ್ಟೀಕರಣ ನೀಡಿದ್ದಾರೆ.












Click it and Unblock the Notifications