ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಂಧಿತ ನವಾಬ್ ಮಲಿಕ್ ಆಸ್ಪತ್ರೆಗೆ ದಾಖಲು
ಮುಂಬೈ ಫೆಬ್ರವರಿ 25: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬುಧವಾರ ಬಂಧಿತರಾಗಿರುವ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೂಲಗಳು ತಿಳಿಸಿವೆ. ವೈದ್ಯರ ಸಲಹೆಯಂತೆ ಎನ್ ಸಿಪಿ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನವಾಬ್ ಮಲಿಕ್ ಅವರ ಪುತ್ರಿ ಸನಾ ಖಾನ್ ಅವರು ತಮ್ಮ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ನವಾಬ್ ಮಲಿಕ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎಂದು ಪುತ್ರಿ ಸನಾ ಖಾನ್ ಅವರು ಹೇಳಿದ್ದಾರೆ. ಅವರು ಜೆಜೆ ಆಸ್ಪತ್ರೆಯಲ್ಲಿ ವೈದ್ಯರಿಂದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎನ್‌ಸಿಪಿ ನಾಯಕರ ಕಚೇರಿ ಟ್ವೀಟ್ ಮಾಡಿದೆ.
ನವಾಬ್ ಮಲಿಕ್ ಬಂಧನ: ಶರದ್ ಪವಾರ್‌ಗೆ ಕರೆ ಮಾಡಿದ ಮಮತಾ
ಮಾರ್ಚ್ 3 ರವರೆಗೆ ಇಡಿ ಕಸ್ಟಡಿಯಲ್ಲಿರುವ ನವಾಬ್ ಮಲಿಕ್ ಅವರನ್ನು ಸಾಮಾನ್ಯ ತಪಾಸಣೆಗಾಗಿ ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರನ್ನು ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವಾಬ್ ಮಲಿಕ್ ಅವರು ಕುರ್ಲಾದಲ್ಲಿ ಹಲವು ವರ್ಷಗಳ ಹಿಂದೆ ಅತ್ಯಂತ ಅಗ್ಗದ ಬೆಲೆಗೆ ಖರೀದಿಸಿದ ಜಮೀನಿಗೆ ಸಂಬಂಧಿಸಿದಂತೆ ಇಡಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಮಲಿಕ್ ಭೂಗತ ಪಾತಕಿಗಳಿಂದ ಈ ಜಮೀನನ್ನು ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಮಲಿಕ್ ವಿರುದ್ಧದ ಈ ಗಂಭೀರ ಆರೋಪವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕೆಲವು ತಿಂಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದರು. ಮಲಿಕ್ ಈ ಜಮೀನಿನ ಮೌಲ್ಯವನ್ನು ಕಡಿಮೆ ತೋರಿಸಿದ್ದಾರೆಂದು ಫಡ್ನವೀಸ್ ಹೇಳಿದ್ದರು.
ಮಹಾರಾಷ್ಟ್ರದ ರಾಜಕೀಯದಲ್ಲಿ ಬಿಸಿ ಮುಟ್ಟಿಸಿದ ನವಾಬ್ ಮಲಿಕ್ ಯಾರು, ಆಸ್ತಿ ಎಷ್ಟು?
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಬ್ ಮಲಿಕ್ ಅವರನ್ನು ಇಡಿ ವಿಚಾರಣೆಗೊಳಪಡಿಸಿದೆ. ಕೆಲ ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಇಕ್ಬಾಲ್ ಕಸ್ಕರ್‌ನ ಸಾಕ್ಷ್ಯದ ಮೇರೆಗೆ ಇಡಿ ನವಾಬ್ ಮಲಿಕ್‌ನನ್ನು ವಿಚಾರಣೆಗೊಳಪಡಿಸಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಮಲಿಕ್ ಅವರು ಭೂಗತ ಜಗತ್ತಿನ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂಬೈ ಸ್ಫೋಟದ ಆರೋಪಿ ಮತ್ತು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸರ್ದಾರ್ ವಾಲಿ ಶಾ ಖಾನ್ ಇಬ್ಬರನ್ನು ಫಡ್ನವಿಸ್ ಹೆಸರಿಸಿದ್ದರು. ದಾವೂದ್ ಸಹೋದರಿ ಹಸೀನಾ ಪರ್ಕರ್ ಅವರ ಅಂಗರಕ್ಷಕರಾಗಿದ್ದ ಮೊಹಮ್ಮದ್ ಸಲೀಂ ಪಟೇಲ್ ಅವರ ಹೆಸರು ಬಹಿರಂಗಪಡಿಸಿದ್ದರು. ಹಸೀನಾಳ ಸಂಪೂರ್ಣ ಭೂಮಿ ಮೊಹಮ್ಮದ್ ಸಲೀಂ ಪಟೇಲ್ ಹೆಸರಿನಲ್ಲಿದೆ. ಮಲಿಕ್ ಈ ಇಬ್ಬರು ಆರೋಪಿಗಳಿಂದ ಕುರ್ಲಾ ಬಳಿ ಸುಮಾರು ಮೂರು ಎಕರೆ ಜಮೀನು ಖರೀದಿಸಿದ್ದು, ಅದಕ್ಕೆ ಅತ್ಯಂತ ಕಡಿಮೆ ಬೆಲೆ ನೀಡಲಾಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ.












Click it and Unblock the Notifications