ಏರ್‌ಇಂಡಿಯಾ ಗಗನಸಖಿಗೆ ಹಿರಿಯ ಅಧಿಕಾರಿಯಿಂದ ಕಪಾಳಮೋಕ್ಷ
ಮುಂಬೈ, ಮಾರ್ಚ್ 23: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಸ್ಯಹಾರಿ ಪ್ರಯಾಣಿಕರೊಬ್ಬರಿಗೆ ಪ್ರಮಾದದಿಂದ ಮಾಂಸಾಹಾರ ಖಾದ್ಯ ಸರ್ವ್ ಮಾಡಿದ ಗಗನಸಖಿಗೆ ಆಕೆಯ ಹಿರಿಯ ಅಧಿಕಾರಿ ಕಪಾಳಕ್ಕೆ ಭಾರಿಸಿದ್ದಾರೆ. ಮಾರ್ಚ್ 17 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನವ ದೆಹಲಿಯಿಂದ - ಫ್ರಾಂಕ್‌ಫರ್ಟ್‌ಗೆ ಹೊರಟಿದ್ದ AI 121 ವಿಮಾನದಲ್ಲಿ ಈ ರೀತಿಯ ಘಟನೆ ನಡೆದಿದೆ. ಅಲ್ಲಿನ ಒಬ್ಬ ಗಗನಸಖಿ ಬ್ಯುಸಿನೆಸ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಪ್ರಮಾದವಶಾತ್ ಸಸ್ಯಾಹಾರದ ಬದಲಿಗೆ ಮಾಂಸಾಹಾರ ನೀಡಿದ್ದರು, ಆದರೆ ಕೂಡಲೆ ಎಚ್ಚೆತ್ತುಕೊಂಡು ಊಟವನ್ನು ಬದಲಾಯಿಸಿಕೊಟ್ಟು ಕ್ಷಮಾಪಣೆ ಕೋರಿದ್ದರು. ಈ ಬಗ್ಗೆ ಆ ಪ್ರಯಾಣಿಕರೂ ಕೂಡ ಯಾವುದೇ ದೂರು ನೀಡಿರಲಿಲ್ಲ.
ಆದರೆ ಘಟನೆ ಬಗ್ಗೆ ತಿಳಿದ ಹಿರಿಯ ಅಧಿಕಾರಿ ವಿಮಾನದ ಅತಿಥೇಯ ಸಿಬ್ಬಂದಿಗಳ ಹಿರಿಯ ಅಧಿಕಾರಿ ಗಗನಸಖಿಯನ್ನು ಕರೆದು ವಾಗ್ವಾದ ನಡೆಸಿ ಕಪಾಳಕ್ಕೆ ಹೊಡೆದಿದ್ದರು. ಆಗ ಪ್ರತಿಭಟಿಸದಿದ್ದ ಗಗನಸಖಿ ಆ ನಂತರ ಏರ್‌ಲೈನ್ಸ್ ನೌಕರರ ರಕ್ಷಣೆ ವಿಭಾಗದಲ್ಲಿ ದೂರು ನೀಡಿದ್ದರು.

ಏರ್ ಇಂಡಿಯಾ ವಿಮಾನಯಾನದ ಆಡಳಿತವು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲಿ ಆ ಹಿರಿಯ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಈ ಮುಂಚೆ ಸಹ ಇಂತಹುದೇ ಒಂದು ಘಟನೆ ಮುಂಬೈನಿಂದ ವರದಿಯಾಗಿತ್ತು. ಆದರೆ ಆ ಪ್ರಕರಣದಲ್ಲಿ ಸಿಬ್ಬಂದಿಯೋರ್ವ ಪ್ರಯಾಣಿಕನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದ. ಈ ಘಟನೆ ಸದನದಲ್ಲಿಯೂ ಪ್ರಸ್ತಾಪವಾಯಿತು.
ಇದಕ್ಕೆ ಮುಂಚೆ ಶಿವಸೇನೆ ಪಕ್ಷದ ಸಂಸದ ರವೀಂದ್ರ ಗಾಯಕ್‌ವಾಡ್ ಏರ್ ಇಂಡಿಯಾದ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದದ್ದು ದೇಶಾದ್ಯಂತ ಚರ್ಚೆಯಾಗಿತ್ತು. ರವೀಂದ್ರ ಗಾಯಕ್‌ವಾಡ್ ವಿರುದ್ಧ ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಪ್ರತಿಭಟನೆ ಮಾಡಿದವು. ಅವರಿಗೆ ತಮ್ಮ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ದವು.












Click it and Unblock the Notifications