ಮುಂಬೈ : ನೇಣು ಕುಣಿಕೆಯಿಂದ ಯಾಕೂಬ್ ಪಾರು
ಮುಂಬೈ, ಜೂ.2: 1993ರಲ್ಲಿ ನಡೆದ ಮುಂಬೈನ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ರೂವಾರಿ ಯಾಕೂಬ್ ರಜಾಕ್ ಮೆಮೊನ್ ಸದ್ಯ ನೇಣು ಕುಣಿಕೆಯಿಂದ ಪಾರಾಗಿದ್ದಾನೆ. ಯಾಕೂಬ್ ಮೆಮೊನ್ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಸುಪ್ರೀಂಕೋರ್ಟ್ ಮುಂದೆ ಸೋಮವಾರ ಗಲ್ಲು ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಸದ್ಯದ ಮಟ್ಟಿಗೆ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಿದೆ. ಕಳೆದ 20 ವರ್ಷಗಳಿಂದ ನಾನು ಸೆರೆವಾಸದಲ್ಲಿರುವ ಕಾರಣ ಪ್ರಸ್ತುತ ಗಲ್ಲುಶಿಕ್ಷೆಯಿಂದ ಕ್ಷಮಾದಾನ ನೀಡಬೇಕು ಎಂದು ಅಪರಾಧಿ ಯಾಕೂಬ್ ಮೆಮೊನ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ.
ಈ ಹಿಂದೆ ರಾಷ್ಟ್ರಪತಿಗೆ ಸಲ್ಲಿಸಿದ್ದ ಕ್ಷಮಾಧಾನದ ಅರ್ಜಿ ತಿರಸ್ಕೃತಗೊಂಡಿತ್ತು. ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ಮುಂದಿನ ತೀರ್ಮಾನ ಮಾಡಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೂಚನೆ ನೀಡಿದ್ದರು. ಅಲ್ಲೂ ಕೂಡ ಯಾವುದೇ ಕಾರಣಕ್ಕೂ ಮೆಮನ್‌ಗೆ ಕರುಣೆ ತೋರಬಾರದು ಎಂದು ಅಧಿಕಾರಿಗಳ ತಂಡ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಡ ತಂದಿತ್ತು.
ಕೋರ್ಟ್ ಪ್ರಕ್ರಿಯೆ ತಡವಾದ ಕಾರಣ ಮೆಮೊನ್ ಸುಪ್ರೀಂಕೋರ್ಟ್‌ಗೆ ಮತ್ತೊಮ್ಮೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ಇಂದು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಡೆ ನೀಡಿದೆ.

ಪ್ರಕರಣದ ಹಿನ್ನೆಲೆ: ಟೈಗರ್ ಮೆಮೊನ್ ನ ಸೋದರನಾದ ಯಾಕೂಬ್ ಮೆಮನ್ ಚಾರ್ಟೆಡ್ ಅಕೌಂಟೆಂಟ್ ಕೆಲಸ ಮಾಡುತ್ತಿದ್ದ. ತನ್ನ ಅಣ್ಣನಿಗೆ ಈತ ಭಯೋತ್ಪಾದನೆಗೆ ಸಹಕಾರಿಯಾಗಿದ್ದ ಎಂದು ಪೊಲೀಸರು ಈತನನ್ನು 1994ರಲ್ಲಿ ನೇಪಾಳದ ಕಾಠ್ಮಂಡುವಿನಲ್ಲಿ ಬಂಧಿಸಲಾಗಿತ್ತು.
ಸುದೀರ್ಘ ವಿಚಾರಣೆ ನಡೆದು ಟಾಡಾ ನ್ಯಾಯಾಲಯ 2007ರಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ನಂತರ ಆತ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದ. ಅಲ್ಲೂ ಆತನ ಶಿಕ್ಷೆ ಖಾಯಂಗೊಂಡಿತ್ತು.
ನಂತರ 2013ರಲ್ಲಿ ಸುಪ್ರೀಂಕೋರ್ಟ್ ಅಂಗಳದಲ್ಲೂ ಪ್ರಕರಣದ ವಿಚಾರಣೆ ನಡೆದು ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಲಾಗಿತ್ತು. ಮುಂಬೈನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 713 ಮಂದಿ ಗಾಯಗೊಂಡಿದ್ದರು. ಸಿಬಿಐ ಇದರ ತನಿಖೆ ನಡೆಸಿ ದಾವೂದ್ ಇಬ್ರಾಹಿಂ ಸೇರಿದಂತೆ ಹಲವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. [1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು]












Click it and Unblock the Notifications