ಕುವೈತ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ 35 ಯುವಕರು: ಸದಾನಂದ ಗೌಡ ಭರವಸೆ
ಮಂಗಳೂರು ಮೇ 25: ಮಂಗಳೂರಿನ ಸಂಸ್ಥೆಯೊಂದು 35 ಮಂದಿ ಯುವಕರನ್ನು ವಿದೇಶಕ್ಕೆ ಕರೆದೊಯ್ದು ಸೂಕ್ತ ಉದ್ಯೋಗ ಕಲ್ಪಿಸದೆ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ನಗರದ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್ ಮೆಂಟ್ ಎನ್ನುವ ಕಂಪೆನಿಯಿಂದ ವಂಚನೆಗೊಳಗಾದ 35 ಮಂದಿ ಮಂಗಳೂರಿಗರು ಕಳೆದ 6 ತಿಂಗಳಿನಿಂದ ಕುವೈತ್ ನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.
ಕುವೈಟ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್ ಮೆಂಟ್ ಕಂಪೆನಿಯ ಪ್ರಸಾದ್ ಶೆಟ್ಟಿ ಎಂಬಾತ ಪ್ರತಿಯೊಬ್ಬರಿಂದ 65 ಸಾವಿರ ರೂಪಾಯಿ ವಸೂಲಿ ಮಾಡಿದ್ದಾನೆ. ಆದರೆ, ಇದನ್ನು ನಂಬಿ ಕುವೈತ್ ಗೆ ತೆರಳಿದ್ದ ಯುವಕರು ಮಾತ್ರ ಸರಿಯಾದ ಕೆಲಸ ದೊರೆಯದೆ ಕಳೆದ 6 ತಿಂಗಳಿಂದ ಪರದಾಟ ನಡೆಸಿದ್ದಾರೆ.
ಪ್ರಸ್ತುತ, ಊಟಕ್ಕೂ ಗತಿಯಿಲ್ಲದೇ ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸಂತ್ರಸ್ತರು ಮಂಗಳೂರಿನ ಶಾಸಕರು ಸೇರಿದಂತೆ ಜನತೆ ಸಹಾಯ ಮಾಡಬೇಕೆಂದು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂಸದ ಡಿ.ವಿ.ಸದಾನಂದ ಗೌಡ ಪ್ರತಿಕ್ರಿಯಿಸಿದ್ದು, ಕುವೈತ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರ ಬಗ್ಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರಿಗೂ ತಿಳಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಅವರು ಕುವೈತ್ ನಲ್ಲಿರುವ ತನ್ನ ಗೆಳೆಯರನ್ನು ಸಂಪರ್ಕಿಸಿ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ಕೇಂದ್ರ ಸಚಿವಾಲಯದ ಮೂಲಕ ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿ ಸಂತ್ರಸ್ತರನ್ನು ಹಿಂದಕ್ಕೆ ಕರೆಸಿಕೊಳ್ಳುವ ವ್ಯವಸ್ಥೆಯ ಬಗ್ಗೆಯೂ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ.












Click it and Unblock the Notifications