ಈಜಲು ತೆರಳಿದ್ದ ಮಗನನ್ನು ಸ್ನೇಹಿತರೇ ಕೊಂದರೆಂದು ದೂರು ಕೊಟ್ಟ ಪೋಷಕರು
ಮಂಗಳೂರು, ಅಕ್ಟೋಬರ್ 4: ಈಜಲು ಕೆರೆಗೆ ತೆರಳಿದ್ದ ಯುವಕ ವಾಪಸ್ ಮನೆಗೆ ಬಂದಿಲ್ಲ ಎಂದು ಆತನ ಪೋಷಕರು, ಸ್ನೇಹಿತರೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಶಂಕೆ ವ್ಯಕ್ತಪಡಿಸಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜಿ ಸಮೀಪದ ಶಿಬರೂರು ದೇವಸ್ಥಾನ ಸಮೀಪದ ಕೆರೆಯಲ್ಲಿ ಯುವಕ ಮೃತಪಟ್ಟಿದ್ದಾನೆ ಎಂಬುದು ಪೋಷಕರು ಆರೋಪ. ಮಂಗಳವಾರ ತಡರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಸುರತ್ಕಲ್ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಸುರತ್ಕಲ್ ನ ಕೃಷ್ಣಾಪುರದ ನಿವಾಸಿ ಫಯಾಜ್ ಎಂಬುವರ ಮಗ ಮಕ್ಸೂದ್ ಸದ್ಯಕ್ಕೆ ಪತ್ತೆಯಾಗಿಲ್ಲ. ಆತ ಮಂಗಳೂರಿನ ಎಂಆರ್ ಪಿಎಲ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ಸಂಜೆ ತನ್ನ ಸ್ನೇಹಿತರ ಜೊತೆ ಸುರತ್ಕಲ್ ಬಳಿ ಇರುವ ಶಿಬರೂರು ದೇವಸ್ಥಾನ ಸಮೀಪದ ಕೆರೆಯ ಕಡೆಗೆ ಈಜಲೆಂದು ತೆರಳಿದ್ದ.
ರಾತ್ರಿಯಾಗುತ್ತಲೇ ಉಳಿದ ಸ್ನೇಹಿತರು ತಮ್ಮ ಮನೆಗಳಿಗೆ ವಾಪಸ್ ಆಗಿದ್ದು, ಮಕ್ಸೂದ್ ಮಾತ್ರ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಆತನ ಪೋಷಕರು ಸ್ನೇಹಿತರನ್ನು ವಿಚಾರಿಸಿದಾಗ ಅವರು ಸರಿಯಾಗಿ ಉತ್ತರಿಸಿಲ್ಲ. ಆದ್ದರಿಂದ ಸುರತ್ಕಲ್ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ. ತಕ್ಷಣವೇ ಶಿಬರೂರು ಬಳಿ ತೆರಳಿದ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಯಾವ ಸುಳಿವು ಪತ್ತೆಯಾಗಿಲ್ಲ.
ಮಕ್ಸೂದ್ ಪೋಷಕರು, ಇದು ಉದ್ದೇಶಪೂರ್ವಕವಾಗಿ ನಡೆದ ಕೃತ್ಯ. ನಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರಿದ್ದಾರೆ. ಮಕ್ಸೂದ್ ಜೊತೆ ತೆರಳಿದ್ದ ನಾಲ್ವರನ್ನು ಬುಧವಾರ ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮಕ್ಸೂದ್ ಪತ್ತೆಗಾಗಿ ಮುಳುಗು ತಜ್ಞರಿಂದ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ನೀರಿನಲ್ಲಿ ವಾಚ್ ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ.












Click it and Unblock the Notifications