ಯಕ್ಷಗಾನ ರಂಗದಿಂದ ನಿವೃತ್ತಿ ನಿರ್ಧಾರ ಹಿಂಪಡೆದ ಕಲಾವಿದರು
ಮಂಗಳೂರು, ಅಕ್ಟೋಬರ್ 3: ಯಕ್ಷಗಾನ ಪ್ರದರ್ಶನದ ವೇಳೆ ತುಟಿಗೆ ತುಟಿ ಬೆಸೆದ ಆಪಾದನೆಯ ಪ್ರಕರಣ ಒಂದು ಮಟ್ಟಿಗೆ ತಣ್ಣಗಾದಂತಾಗಿದೆ. ಯಕ್ಷಗಾನ ಪ್ರಸಂಗದ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಟೀಕೆ ವ್ಯಕ್ತವಾಗಿತ್ತು. ಆ ಕಾರಣಕ್ಕೆ ಕಲಾವಿದರಾದ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಹಾಗೂ ರಾಜೇಶ್ ರೈ ಅಡ್ಕ ಯಕ್ಷಗಾನ ಕ್ಷೇತ್ರದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದರು.
ಆದರೆ, ಅಭಿಮಾನಿಗಳು, ಹಿತೈಷಿಗಳು ಹಾಗೂ ಹಿರಿಯ ಯಕ್ಷಗಾನ ಕಲಾವಿದರ ಒತ್ತಾಯಕ್ಕೆ ಮಣಿದು ಈ ನಿರ್ಧಾರದಿಂದ ಹಿಂದೆ ಸರಿದು, ಮತ್ತೆ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿಯಲು ಕಲಾವಿದರು ನಿರ್ಧರಿಸಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಲಾವಿದರಾದ ರಾಜೇಶ್ ರೈ ಅಡ್ಕ ಹಾಗೂ ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಇತ್ತೀಚೆಗೆ ಪ್ರದರ್ಶಿಸಿದ ನಾಟ್ಯ ವೈಭವ ಕಾರ್ಯಕ್ರಮದಲ್ಲಿ ನಾವು ಮಾಡದ ಕೃತ್ಯವನ್ನು ತಪ್ಪೆಂದು ಬಿಂಬಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳನ್ನು ನೀಡಲಾಗಿತ್ತು ಎಂದರು.

ಈ ಪ್ರಸಂಗದ ಸನ್ನಿವೇಶದ ಕುರಿತು ವಿವರಣೆ ಈಗಾಗಲೇ ನೀಡಿದ್ದೇವೆ. ಒಂದು ವೇಳೆ ನೋಡುಗರ ಕಣ್ಣಿಗೆ ತಪ್ಪಾಗಿ ಕಂಡರೆ ಅದಕ್ಕೆ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದ್ದೆವು. ಇಷ್ಟಾದರೂ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ತೇಜೋವಧೆ ಮುಂದುವರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಕ್ಷಗಾನ ಕ್ಷೇತ್ರದಿಂದ ನಿವೃತ್ತಿ ಪಡೆಯಲು ನಾವು ತೀರ್ಮಾನಿಸಿದ್ದೇವು ಎಂದು ಹೇಳಿದರು.
ಆದರೆ, ಯಕ್ಷಾಭಿಮಾನಿಗಳ ಹಿತೈಷಿಗಳು ಹಾಗೂ ಹಿರಿಯ ಕಲಾವಿದರು ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರೆಯುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮತ್ತೆ ಕ್ಷೇತ್ರಕ್ಕೆ ಮರಳಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.












Click it and Unblock the Notifications