Yakshagana: ತೆಂಕುತಿಟ್ಟು ಯಕ್ಷಗಾನದ ಹಿರಿಮೆ ಪೆರುವಾಯಿ ನಾರಾಯಣ ಶೆಟ್ಟಿ ವಿಧಿವಶ
ಮಂಗಳೂರು, ಜನವರಿ 24: ತೆಂಕುತಿಟ್ಟು ಯಕ್ಷಗಾನದ ಕಿರೀಟವೇಷಗಳಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ, ವೈಶಿಷ್ಟ್ಯಪೂರ್ಣ ನಾಟಕೀಯ ವೇಷಗಳಿಂದ ಯಕ್ಷಲೋಕದಲ್ಲಿ ಮೆರೆದ ಪೆರುವಾಯಿ ನಾರಾಯಣ ಶೆಟ್ಟಿಯವರು ಇಹಲೋಕ ತ್ಯಜಿಸಿದ್ದಾರೆ.
ಯಕ್ಷಗಾನದ ಆಕರ್ಷಕ್ಕೊಳಗಾಗಿ ತೆಂಕುತಿಟ್ಟು ಯಕ್ಷಗಾನವನ್ನು ಅಭ್ಯಾಸ ಮಾಡಿದ ಪೆರುವಾಯಿ ನಾರಾಯಣ ಶೆಟ್ಟರು ತಮ್ಮ 12ನೇ ವಯಸ್ಸಿನಲ್ಲಿಯೇ ರಂಗಸ್ಥಳ ಪ್ರವೇಶ ಮಾಡಿದವರು. ಶುದ್ಧ ತೆಂಕುತಿಟ್ಟು ಶೈಲಿಯ ನಾಟ್ಯ, ಅಭಿನಯ, ಮಾತುಗಾರಿಕೆಯಿಂದ ಯಕ್ಷರಂಗದ ರಾಜ ಎಂದೇ ಮೆರೆದವರು.

ಇವರ ರಕ್ತಬೀಜ, ಋತುಪರ್ಣ, ಹಿರಣ್ಯಾಕ್ಷ, ಶಿಶುಪಾಲ, ಕೌರವ, ಕರ್ಣ, ಅರ್ಜುನ, ಅತಿಕಾಯ, ಇಂದ್ರಜಿತು ಮುಂತಾದ ಕಿರೀಟ ವೇಷಗಳು, ಕಂಸ, ಹಿರಣ್ಯಕಶ್ಯಪ, ಸುಂದರ ರಾವಣ, ಅರುಣಾಸುರ ಮುಂತಾದ ನಾಟಕೀಯ ವೇಷ ಸೇರಿದಂತೆ ಜಾಬಾಲಿ, ಹನೂಮಂತ ಪಾತ್ರಗಳನ್ನು ರಂಗದಲ್ಲಿ ಮೆರೆಯಿಸಿದವರು. ತುಳು ಪ್ರಸಂಗಗಳ ಪಾತ್ರ ನಿರ್ವಹಣೆಯಲ್ಲೂ ವೈಶಿಷ್ಟ್ಯತೆ ಮೆರೆದ ಇವರ ಕೋಟಿ, ದೇವುಪೂಂಜ ಮುಂತಾದ ಪಾತ್ರಗಳು ಬಹಳ ಜನಪ್ರಿಯವಾಗಿದ್ದವು.
ಕುಂಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ತೆಂಕುತಿಟ್ಟಿ ವಿವಿಧ ಯಕ್ಷಗಾನ ಮೇಳಗಳಲ್ಲಿ ತಿರುಗಾಟ ಮಾಡಿದವರು. ಬಂಟ್ವಾಳ ತಾಲೂಕು ಪೆರುವಾಯಿಯಲ್ಲಿ ಜನಿಸಿದ್ದ ಇವರು ಕಟೀಲು ಮೇಳವೊಂದರಲ್ಲಿಯೇ 23 ವರ್ಷ ತಿರುಗಾಟ ಮಾಡಿದ್ದರು. ಸದ್ಯ ಬಾಕ್ರಬೈಲು ಪಾತೂರಿನಲ್ಲಿ ನೆಲೆಸಿದ್ದ ಇವರು ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಪೆರುವಾಯಿ ನಾರಾಯಣ ಶೆಟ್ಟಿ ಬಾಲ್ಯ, ಕಲಾಸೇವೆ
1947ರಲ್ಲಿ ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಯ ಪುತ್ರನಾಗಿ ಜನನಿಸಿದ ಪೆರುವಾಯಿ ನಾರಾಯಣ ಶೆಟ್ಟಿ 6ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಬಂಟ್ವಾಳ ತಾಲೂಕು ಪೆರುವಾಯಿ ಇವರ ಹುಟ್ಟೂರಾಗಿದ್ದು, ಕುಂಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ಗುರುತಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಎಳೆ ವಯಸ್ಸಿನಲ್ಲೆ ಯಕ್ಷಗಾನದತ್ತ ಆಕರ್ಷಿತರಾದ ಪೆರುವಾಯಿ ನಾರಾಯಣ ಶೆಟ್ಟಿ ಅವರು ಕುಂಡಾವು ಮೇಳದಲ್ಲಿ ರಂಗಪ್ರವೇಶ ಮಾಡಿದರು. ಬಾಯಾರು ಐತಪ್ಪ ಶೆಟ್ಟಿ, ಕುಡಾಣ ಗೋಪಾಲಕೃಷ್ಣ ಭಟ್, ಅಳಿಕೆ ರಾಮಯ್ಯ ರೈ ಈ ಗುರುತ್ರಯರಿಂದ ಯಕ್ಷಗಾನ ಅಭ್ಯಾಸ ಮಾಡಿಕೊಂಡರು. ಇವರಿಗೆ ಕರುವೊಳು ದೇರಣ್ಣ ಶೆಟ್ಟಿ ಗೆಜ್ಜೆ ನೀಡಿ ಪ್ರೋತ್ಸಾಹಿಸಿದರು.












Click it and Unblock the Notifications