ಯಕ್ಷಗಾನದ ದಂತಕತೆ ಪೆರುವೋಡಿ ನಾರಾಯಣ ಭಟ್ ಇನ್ನಿಲ್ಲ.!
ಮಂಗಳೂರು, ಅಕ್ಟೋಬರ್, 31: ಯಕ್ಷಗಾನದಲ್ಲಿ "ನಳದಮಯಂತಿ" ಪ್ರಸಂಗದ ಬಾಹುಕ ಹಾಗೂ ಪಾಪಣ್ಣ ವಿಜಯ ಗುಣಸುಂದರಿಯ "ಪಾಪಣ್ಣ" ಪಾತ್ರಕ್ಕೆ ಹೊಸ ಆಯಾಮ ನೀಡಿದ ಯಕ್ಷಗಾನದ ದಂತಕತೆ ಪೆರುವೋಡಿ ನಾರಾಯಣ ಭಟ್ (96) ಇಂದು ಇಹಲೋಕದ ಯಾತ್ರೆ ಮುಗಿಸಿ ಕಲಾದೇವಿಯ ಮಡಿಲು ಸೇರಿದ್ದಾರೆ.
ಒಂದು ಶತಮಾನದ ಯಕ್ಷಗಾನ ಚರಿತ್ರೆಯ ಸಾಕ್ಷಿಯಂತೆ ಬದುಕಿದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರು ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು, ಅಗರಿ ಶ್ರೀನಿವಾಸ ಭಾಗವತರು ಮೊದಲಾದ ದಿಗ್ಗಜಗಳೊಂದಿಗೆ ಒಡನಾಡಿದವರು. ಪೆರುವೋಡಿ ನಾರಾಯಣ ಭಟ್ಟರಂತೆ ಯಕ್ಷಗಾನದಲ್ಲಿ ಹಾಸ್ಯಪಾತ್ರದಲ್ಲಿ ಭಾಷೆಯನ್ನು ಸೊಗಸಾಗಿ ಬಳಸಿದವರು ವಿರಳವೇ ಎನ್ನಬಹುದು. ಹಾಸ್ಯಗಾರರೆಂದು ಪ್ರಸಿದ್ಧರಾದರೂ ಗಂಭೀರ ಪೋಷಕ ಪಾತ್ರಗಳ ಪ್ರಸ್ತುತಿಗೂ ಅವರು ಹೆಸರಾಗಿದ್ದರು.

ಪುತ್ತೂರು ನಾರಾಯಣ ಹೆಗಡೆ, ಎಂಪೆಕಟ್ಟೆ ರಾಮಯ್ಯ ರೈಯಂಥವರು, ಹಾರಾಡಿ ರಾಮ ಗಾಣಿಗ, ಕೊಕ್ಕರ್ಣೆ ನರಸಿಂಹ ಕಮ್ತಿ, ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ ರೈ, ಕಡಂದೇಲು ಪುರುಷೋತ್ತಮ ಭಟ್ಟ, ಕೋಳ್ಯೂರು ರಾಮಚಂದ್ರ ರಾವ್ ಮೊದಲಾದವರ ಜೊತೆಗೆ ವೇಷ ಮಾಡಿದವರು. ಪೆರುವೋಡಿಯವರ ನಾರದನ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಡಗಿನ ಸಾಲಿಗ್ರಾಮ ಮೇಳದಲ್ಲಿ ಗುಂಡ್ಮಿ ಕಾಳಿಂಗ ನಾವಡ, ಚಿಟ್ಟಾಣಿ ರಾಮಚಂದ್ರ ಹೆಗಡೆ ಮೊದಲಾದವರೊಂದಿಗೆ ತಿರುಗಾಟ ನಡೆಸಿದ್ದರು.
ಸುರತ್ಕಲ್ ಮೇಳದಲ್ಲಿ ಜಯಭೇರಿ ಭಾರಿಸಿದ್ದ 'ಪಾಪಣ್ಣ ವಿಜಯ'ದ ಪಾಪಣ್ಣನ ಪಾತ್ರದಲ್ಲಿ ಇವರನ್ನು ಮೀರಿಸಿದವರು ಇವತ್ತಿನವರೆಗೂ ಇಲ್ಲ. ಬಾಹುಕನ ಪಾತ್ರಕ್ಕೆ ಹೊಸ ಭಾವನಾತ್ಮಕ ಆಯಾಮವನ್ನು ಕೊಟ್ಟಿದ್ದರು. ಕದ್ರಿ ಮೇಳದಲ್ಲಿ 'ಗೆಜ್ಜೆದ ಪೂಜೆ' ಪ್ರಸಂಗದ ಬೇಚನ ಪಾತ್ರಚಿತ್ರಣ ಇವತ್ತಿಗೂ ಸ್ಮರಣೀಯ. ಬಪ್ಪನಾಡು ಮೇಳದಲ್ಲಿ ರಾಮದಾಸ ಸಾಮಗರ ಕೈಲಾಸ ಶಾಸ್ತ್ರಿ ಪಾತ್ರಕ್ಕೆ ಮಾಣಿಯಾಗಿ ಜನಪ್ರಿಯರಾಗಿದ್ದರು. ಪೆ
ರುವೋಡಿ ನಾರಾಯಣ ಭಟ್ಟರ ಆತ್ಮಕಥನವನ್ನು ನಾ. ಕಾರಂತ ಪೆರಾಜೆಯವರು ನಿರೂಪಿಸಿದ್ದು ಅದು ಪ್ರಕಟವಾಗಿದೆ. ಪೆರುವೋಡಿ ನಾರಾಯಣ ಭಟ್ಟರ ನಿಧನದೊಂದಿಗೆ ಯಕ್ಷಗಾನದಲ್ಲಿ 'ಹಾಸ್ಯರಸ'ದ ಘನತೆಯ ಅಭಿವ್ಯಕ್ತಿಯ ಮಾದರಿಯೊಂದು ಮರೆಗೆ ಸರಿದಂತಾಗಿದೆ.












Click it and Unblock the Notifications