ಕಾರ್ಯನಿರತ ಪತ್ರಕರ್ತರಿಗೂ ಆರೋಗ್ಯ ವಿಮೆ: ಖಾದರ್
ಮಂಗಳೂರು, ಫೆ. 9: ಕಾರ್ಯನಿರತ ಪತ್ರಕರ್ತರಿಗೂ ಆರೋಗ್ಯ ವಿಮೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಕಂಕನಾಡಿಯ ಟ್ಯಾಲೆಂಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಕೋಸ್ಟಲ್ ಡೈಜೆಸ್ಟ್ ಡಾಟ್ ಕಾಮ್, ಎಂಫ್ರೆಂಡ್ಸ್ ಮತ್ತು ಟೀಮ್ ಅಹ್ಲನ್ ವಾಟ್ಸಪ್ ಗ್ರೂಪ್‌ಗಳ ಸಹಯೋಗದಲ್ಲಿ ಹಮ್ಮಿಕೊಂಢಿದ್ದ ಪತ್ರಿಕಾ ಛಾಯಾಚಿತ್ರಗಾರ ಅಹ್ಮದ್ ಅನ್ವರ್ ಅವರ 'ಸ್ಟ್ರೀಟ್ ಲೈಫ್' ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.[ಎಪಿಎಲ್ ಕುಟುಂಬ, ಸರ್ಕಾರಿ ನೌಕರರಿಗೂ ಆರೋಗ್ಯ ಭಾಗ್ಯ]

ಪಿಂಚಣಿ ಪಡೆದುಕೊಳ್ಳುವ ನಿವೃತ್ತರಿಗೂ ಯೋಜನೆ ಸೌಲಭ್ಯ ಕಲ್ಪಿಸಲಾಗುವುದು. ಅನ್ವರ್ ಅವರ ಛಾಯಾಚಿತ್ರಗಳು ಸಮಾಜದ ಸಮಸ್ಯೆಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದಿಟ್ಟು, ಪರಿಹಾರ ಸೂಚಿಸಲು ಮಾರ್ಗದರ್ಶನ ನೀಡುತ್ತಿವೆ. ಅನಾರೋಗ್ಯವನ್ನು ಧೈರ್ಯದಿಂದ ಎದುರಿಸುವ ಸಾಹಸಿ ಅವರು ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ಬದುಕಿನ ಜಂಜಾಟದಲ್ಲಿ ನಮಗೆ ಬೀದಿಯ ಬದುಕು ನೋಡುವ ಆಸಕ್ತಿ, ವ್ಯವಧಾನ ಇಲ್ಲ. ಅದನ್ನು ಸೆರೆಹಿಡಿದು, ಪ್ರದರ್ಶಿಸಿ, ಸುಧಾರಣೆ ಮಾಡಿಸುವ ಪ್ರಯತ್ನ ಅನ್ವರ್ ಮಾಡಿದ್ದಾರೆ ಎಂದರು.
ವಿಶ್ವಾಸ್ ಬಿಲ್ಡರ್ಸ್ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಅನ್ವರ್ ಅವರ ಛಾಯಾಚಿತ್ರಗಳ ಪುಸ್ತಿಕೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್. ಬಿಡುಗಡೆ ಮಾಡಿದರು. ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಅಹ್ಮದ್ ಅನ್ವರ್, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪ್ರಥಮ ಮುಸ್ಲಿಂ ಯುವತಿ ಶಬಾನಾ ಅವರನ್ನು ಸನ್ಮಾನಿಸಲಾಯಿತು.[ಯುಟಿ ಖಾದರ್ ಪುತ್ರಿಯ ನಕಲಿ ಚಿತ್ರ, ದೂರು ದಾಖಲು]
ಸೈಫ್ ಸುಲ್ತಾನ್ , ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ರಫೀಕ್ ಮಾಸ್ಟರ್, ಅಧ್ಯಕ್ಷ ರಿಯಾಝ್ ಕಣ್ಣೂರು, ರಶೀದ್ ವಿಟ್ಲ ಮತ್ತಿತರರು ಹಾಜರಿದ್ದರು.












Click it and Unblock the Notifications