ಮಂಗಳೂರಿನಲ್ಲಿ ಮತ್ತೆ ಝಳಪಿಸಿದ ತಲ್ವಾರ್; ಅಡ್ಡ ನಿಂತು ಕೊಲೆ ತಡೆದ ಯುವತಿ
ಮಂಗಳೂರು, ಅಕ್ಟೋಬರ್ 8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ರೌಡಿ ಶೀಟರ್‌ಗಳು ಅಟ್ಟಹಾಸ ಮೆರೆದಿದ್ದಾರೆ. ಮಂಗಳೂರು ನಗರ ಹೊರವಲಯದ ಮೂಡುಶೆಡ್ಡೆಯಲ್ಲಿ ಹಾಡುಹಗಲೇ ರೌಡಿಶೀಟರ್‌ಗಳ ತಂಡ ಓರ್ವನ ಹತ್ಯೆಗೆ ಯತ್ನಿಸಿದೆ.
ರೌಡಿಗಳು ಅಬ್ಬರಿಸುತ್ತಿದ್ದರೂ, ಸುತ್ತಲೂ ನಿಂತಿದ್ದವರೆಲ್ಲಾ ಸುಮ್ಮನಿದ್ದ ಸಂದರ್ಭದಲ್ಲಿ ಯುವತಿಯೋರ್ವಳು ದಿಟ್ಟತನದಿಂದ ರೌಡಿಶೀಟರ್‌ಗಳಿಗೆ ಅಡ್ಡ ನಿಂತು ಯುವಕನ ಪ್ರಾಣವನ್ನು ಉಳಿಸಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಒಂದು ವಿಡಿಯೋ ವೈರಲ್ ಆಗಿದ್ದು, ಅಂಗಡಿಯ ಮುಂದೆ ಬಂದ ಆರು ಜನರ ಕೈಯಲ್ಲಿ ಮಾರಕಾಯುಧವನ್ನು ಹಿಡಿದು, ಅಂಗಡಿಯ ಒಳ ನುಗ್ಗಿದ ವ್ಯಕ್ತಿಯ ಹತ್ಯೆಗೆ ಯತ್ನಿಸಿತ್ತು. ಜನ ಎಲ್ಲ ನೋಡುತ್ತಿದ್ದಂತೆಯೇ ಅಂಗಡಿಯ ಒಳಗೆ ನುಗ್ಗಿದ್ದ ವ್ಯಕ್ತಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅಂಗಡಿಗೆ ನುಗ್ಗಲು ಪ್ರಯತ್ನಸಿದ್ದ ವೇಳೆ ಅಂಗಡಿಯಲ್ಲಿದ್ದ ಯುವತಿ ರೌಡಿಶೀಟರ್‌ಗಳ ತಂಡಕ್ಕೆ ಅಡ್ಡಲಾಗಿ ನಿಂತಿದ್ದಾಳೆ. ಹೀಗಾಗಿ ಕೊಲೆ ಬೆದರಿಕೆ ಹಾಕಿದ ತಂಡ ಅಲ್ಲಿಂದ ತೆರಳಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮಾಡಿದ್ದಾರೆ. ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಐವರ ಹೆಡೆಮುರಿ ಕಟ್ಟಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಘಟನೆಯ ಬಗ್ಗೆ ಪಿನ್ ಟು ಪಿನ್ ಮಾಹಿತಿ ನೀಡಿದ್ದಾರೆ.
"ಮಂಗಳೂರು ಕಮೀಷನೇಟರ್ ವ್ಯಾಪ್ತಿಯ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ವಾಮಂಜೂರು ಎಂಬಲ್ಲಿ ಅಕ್ಟೋಬರ್ 6ರಂದು ಮೂರು ಮಂದಿಯ ತಂಡ ಓರ್ವನಿಗೆ ಹಲ್ಲೆ ಮಾಡಿತ್ತು. ಮಂಗಳೂರಿನ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕಾರಣಕ್ಕಾಗಿ ತಂಡ ಕೈಯಿಂದ ಹಲ್ಲೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ ಮತ್ತು ಆತನ ಐದು ಮಂದಿ ಸಹಚರರು ಕೊಲೆ ಯತ್ನಕ್ಕೆ ಮುಂದಾಗಿದ್ದಾರೆ."

"ಯುವಕನನ್ನು ಅಟ್ಟಿಸಿಕೊಂಡು ಬಂದ ತಂಡ, ಯುವಕ ಅಂಗಡಿಯೊಳಗೆ ನುಗ್ಗಿದಾಗ ಕೈಯಲ್ಲಿದ್ದ ಮಾರಕಾಸ್ತ್ರಗಳನ್ನು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಘಟನೆ ಸಂಬಂಧ ಮಂಗಳೂರು ಪೊಲೀಸರು ಐವರನ್ನು ಬಂಧನ ಮಾಡಿದ್ದಾರೆ."
"ಬಂಧಿತರನ್ನು ರಿಝ್ವಾನ್, ಮುಸ್ತಾಫಾ, ಹಕೀಂ, ಶಾರೂಖ್ ಮತ್ತು ನಿಝಾಮ್ ಎಂದು ಗುರತಿಸಲಾಗಿದೆ. ಬಂಧಿತರಲ್ಲಿ ರಿಝ್ವಾನ್ ಮತ್ತು ಮುಸ್ತಫಾ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪ್ರಕರಣ ಕೂಡಾ ಇದೆ. ಬಂಧಿತರಲ್ಲಿ ಓರ್ವನ ಮೇಲೆ 2006 ಮತ್ತು 2020ರಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮತ್ತೊರ್ವನ ಮೇಲೆ 2016ರಲ್ಲಿ ಕೊಲೆ ಪ್ರಕರಣ ದಾಖಲಾಗಿದೆ."
ಪೊಲೀಸರು ಮೊದಲು ಹಲ್ಲೆ ಮಾಡಿದವರ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.












Click it and Unblock the Notifications