ಟಿಪ್ಪು ಜಯಂತಿಗೆ ರಾಜ್ಯದಾದ್ಯಂತ ತಡೆ : ಪ್ರಮೋದ್ ಮುತಾಲಿಕ್
Recommended Video

ಮಂಗಳೂರು, ಅಕ್ಟೋಬರ್ 30: ರಾಜ್ಯ ಸರ್ಕಾರ ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಸಂಘ ಪರಿವಾರದ ಸಂಘಟನೆಗಳೊಂದಿಗೆ ಸೇರಿ ಶ್ರೀರಾಮ ಸೇನೆ ರಾಜ್ಯದೆಲ್ಲೆಡೆ ತಡೆಯೊಡ್ಡಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಸ್ಲಿಂ ಮತಗಳಿಗೋಸ್ಕರ ದೇಶದ್ರೋಹಿ, ಕನ್ನಡ ದ್ರೋಹಿಯಾಗಿದ್ದ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಬ್ಬ ಮತಾಂಧನನ್ನು ವೈಭವೀಕರಿಸಿ ರಾಜ್ಯ ಸರ್ಕಾರ ಜಯಂತಿ ಆಚರಿಸುತ್ತಿರುವುದು ದುರಂತ ಎಂದು ಅವರು ವಿಷಾದ ವ್ಯಕ್ತಪಡಿಸಿದರು .
ಟಿಪ್ಪು ಸುಲ್ತಾನ್ ಎಸಗಿದ ಕ್ರೂರತೆಯ ಬಗ್ಗೆ ಆಧಾರ, ದಾಖಲೆ ಸಹಿತ ವಿವರಿಸುವ ಕಿರು ಪುಸ್ತಕ ಒಂದು ಮುದ್ರಣವಾಗುತ್ತಿದ್ದು ಸದ್ಯದಲ್ಲೇ ಅದನ್ನು ಬಿಡುಗಡೆಗೊಳಿಸಲಾಗುವುದು ಎಂದವರು ಹೇಳಿದರು. ಈ ಕಿರು ಪುಸ್ತಕದ 1 ಲಕ್ಷ ಪ್ರತಿಗಳನ್ನು ರಾಜ್ಯದಾದ್ಯಂತ ವಿತರಿಸಲಾಗುವುದೆಂದು ಅವರು ಸ್ಪಷ್ಟಪಡಿಸಿದರು.

ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸೂಚನೆ ನೀಡಿದ ಪ್ರಮೋದ್ ಮೊತಾಲಿಕ್, ಶೃಂಗೇರಿ, ಚಿಕ್ಕಮಗಳೂರು, ವಿಜಯಪುರ, ಬೆಳಗಾವಿ ಸೇರಿದಂತೆ ಐದು ಕ್ಷೇತ್ರಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಬಿಜೆಪಿಯಿಂದ ಸ್ಪರ್ಧಿಸುವ ಇರಾದೆ ಇದೆ. ಆದರೆ ಬಿಜೆಪಿಯವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದರು.

ಶಿವಸೇನೆಯೊಂದಿಗೆ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದಿದೆ. ಕರ್ನಾಟಕದಲ್ಲಿ ಶಿವಸೇನೆಯನ್ನು ಸ್ಥಾಪಿಸುವ ಬಗ್ಗೆ ಉದ್ಧವ್ ಠಾಕ್ರೆ ಅವರೊಂದಿಗೆ ಮುಂದಿನ ತಿಂಗಳು ಮಾತುಕತೆ ನಡೆಯಲಿದೆ. ಬಿಜೆಪಿ ಹಾಗು ಶಿವಸೇನೆಯೊಂದಿಗೆ ಹೊಂದಾಣಿಕೆ ಆಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications