ಪ್ರತ್ಯೇಕ ಘಟನೆ: ಭಕ್ತರಿದ್ದ ಕಾರ್ ಮೇಲೆ ಮುನಿಸಿಕೊಂಡ ಕಾಡಾನೆಗಳು
ಮಂಗಳೂರು: ಕಾಡಾನೆಯೊಂದು ಹಠಾತ್ ದಾಳಿ ನಡೆಸಿದ ಪರಿಣಾಮ ಕಾರು ಜಖಂಗೊಂಡು, ಕಾರಿನಲ್ಲಿದ್ದ ಓರ್ವ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಳಿನೆಲೆಯಲ್ಲಿ ನಡೆದಿದೆ.
ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಮಾರುತಿ ಓಮ್ನಿ ಕಾರು ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಘಟನೆ ನಡೆದಿದೆ.
ಬಿಳಿನೆಲೆಯ ಸಿಪಿಸಿಆರ್ ಐ ಕಚೇರಿ ಸಮೀಪ ಕಾಡಾನೆ ರಸ್ತೆ ಹಾದು ಹೋಗುತ್ತಿದ್ದುದನ್ನು ಕಂಡ ಕಾರು ಚಾಲಕ ಆನೆಯ ಸಮೀಪದಲ್ಲೇ ಕಾರನ್ನು ನಿಲ್ಲಿಸಿದ್ದಾರೆ.

ಮುಂದೆ ಸಾಗುತ್ತಿದ್ದ ಕಾಡಾನೆ ಹಿಂತಿರುಗಿ ಬಂದು ಸೊಂಡಿಲಿನಿಂದ ಕಾರಿನ ಮುಂಭಾಗಕ್ಕೆ ಬಡಿದು ಹಾನಿಯುಂಟು ಮಾಡಿದೆ. ಇದೇ ವೇಳೆ, ಬಸ್ಸೊಂದು ಹಾರ್ನ್ ಮಾಡುತ್ತಾ ಬಂದ ಕಾರಣ ಗಾಬರಿಗೊಂಡ ಕಾಡಾನೆ ಕಾರನ್ನು ಬಿಟ್ಟು ಓಡಿ ಹೋಗಿದೆ. ಇದರಿಂದ ನಡೆಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ.
ಘಟನೆಯಲ್ಲಿ ಒಬ್ಬರು ಗಂಭೀರ ಗಾಯಗೊಂಡಿದ್ದು, ಇನ್ನುಳಿದವರು ಅಪಾಯದಿಂದ ಪಾರಾಗಿದ್ದಾರೆ.

ಕಡಬ ಸಮೀಪ ದಾಳಿ
ಮತ್ತೊಂದು ಘಟನೆಯಲ್ಲಿ ಕಡಬ ಸಮೀಪದ ನೆಟ್ಟಣ ಎಂಬಲ್ಲಿ ಕಾಡಾನೆಯೊಂದು ಕಾರಿನ ಮೇಲೆ ದಾಳಿ ಮಾಡಿದೆ.
ಶನಿವಾರ ಮುಂಜಾನೆ ಕುಕ್ಕೆ ಸುಬ್ರಹ್ಮಣ್ಯದಿಂದ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದ ಒಮ್ನಿ ಕಾರನ್ನು ಕಾಡಾನೆ ಅಡ್ಡಗಟ್ಟಿದೆ.
ಕಾರ್‌ನಲ್ಲಿದ್ದ ಎಲ್ಲ ಎಂಟು ಮಂದಿ ಆನೆ ದಾಳಿಯಿಂದ ತಪ್ಪಿಸಿಕೊಂಡರೂ, ಕಾರ್‌ಅನ್ನು ಗುರಿಯಾಗಿರಿಸಿಕೊಂಡ ಆನೆ ಅದರ ಮುಂಭಾಗವನ್ನು ಸಂಪೂರ್ಣ ಜಖಂಗೊಳಿಸಿದೆ.
ಚಿಕ್ಕಮಗಳೂರಿನ ಗಿರೀಶ್ ಎಂಬುವವರ ಕುಟುಂಬ ಕಾರ್‌ನಲ್ಲಿ ಕುಕ್ಕೆ ಸುಬ್ರಮಣ್ಯಕ್ಕೆ ತೆರಳಿ, ಮನೆಗೆ ವಾಪಸ್ಸಾಗುತ್ತಿತ್ತು.












Click it and Unblock the Notifications