ಒಂದು ಕೋಟಿ ರೂ.ಬೇಡಿಕೆ ಇಟ್ಟು, ಪತಿಗೇ ಕೊಲೆ ಬೆದರಿಕೆ ಹಾಕಿದ ಪತ್ನಿ!
ಮಂಗಳೂರು, ಡಿಸೆಂಬರ್ 1: ತನ್ನ ಪತಿಯ ಬಳಿಯೇ ಹಣಕ್ಕೆ ಬೇಡಿಕೆ ಇಟ್ಟು, ಕೊಡದೆ ಇದ್ದರೆ ಕೊಲೆ ಮಾಡುವುದಾಗಿ ಸ್ನೇಹಿತನ ಬಳಿ ಮಹಿಳೆಯೊಬ್ಬರು ಬೆದರಿಕೆ ಹಾಕಿಸುತ್ತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಮಣಿಪಾಲ ಮೂಲದ ಅಂಬಿಕಾ ನಾಯಕ್ ಅಕಾ ಅಂಬಿಕಾ ಪ್ರಭು ಮತ್ತು ಆಕೆಯ ಸ್ನೇಹಿತ ಮಂಡ್ಯದ ಬಿ.ಮಂಜುನಾಥ್ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಅಂಬಿಕಾ ನಾಯಕ್(42) ಅವರ ತಂದೆ ಕೆ.ವಾಸುದೇವ ಪ್ರಭು(70)ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಮೂವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಮಗಳ ಈ ಕೃತ್ಯಕ್ಕೆ ತಂದೆಯೂ ಸಮಾನ ಸಹಕಾರ ನೀಡಿದ್ದು, ಈ ಮೂವರೂ ಸೇರಿಕೊಂಡು ಅಂಬಿಕಾ ಅವರ ಪತಿ ಗಣೇಶ್ ನಾಯಕ್ ಅವರ ಬಳಿ 1 ಕೋಟಿ ರೂ. ನೀಡುವಂತೆ ಒತ್ತಾಯಿಸಿ ಪತ್ರ ಬರೆದಿದ್ದರು. ಹಣ ನೀಡದೆ ಇದ್ದಲ್ಲಿ ಗಣೇಶ್ ಅವರನ್ನೂ, ಅವರ ಕುಟುಂಬದ ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದರು.

ಪತಿಯೊಂದಿಗೆ ಅನ್ಯೋನ್ಯವಾಗಿದ್ದುಕೊಂಡೇ ಹೀಗೆ ಕೊಲೆ ಬೆದರಿಕೆ ಹಾಕುತ್ತಿದ್ದ ಅಂಬಿಕಾ ಅವರ ಒಳಸಂಚು ಪತಿಗೆ ತಿಳಿದಿರಲಿಲ್ಲ. ಮಂಜುನಾಥ್ ನ ಬೆದರಿಕೆಗೆ ಹೆದರಿದ ಗಣೇಶ್ ನಾಯಕ್ ಹಲವು ಬಾರಿ ಹಣ ನೀಡಿದ್ದರು. ಮಾತ್ರವಲ್ಲ, 50 ಲಕ್ಷ ರೂ.ಗಳನ್ನು ಮಂಜುನಾಥ್ ನ ಖಾತೆಗೆ ವರ್ಗಾವಣೆ ಮಾಡಿದ್ದರು. ಆ ಹಣವನ್ನು ಮಂಜುನಾಥ್, ಅಂಬಿಕಾ ಮತ್ತು ಆಕೆಯ ತಂದೆ ಹಂಚಿಕೊಂಡಿದ್ದರು. 50 ಲಕ್ಷಕ್ಕೂ ತೃಪ್ತಳಾಗದೆ ಮತ್ತೆ 50 ಲಕ್ಷ ರೂ.ಗಳನ್ನು ನೀಡುವಂತೆ ಒತ್ತಾಯಿಸುವುದಕ್ಕೆ ಆರಂಭಿಸಿದ್ದರು. ನಂತರ ಈ ಮೂವರ ಕಿರುಕುಳ ತಾಳಲಾರದೆ ಉಳ್ಳಾಲ ಪೊಲೀಸ್ ಠಾಣೆಗೆ ಗಣೇಶ್ ದೂರು ನೀದಿದ್ದರು. ಪ್ರಕರಣ ಭೇದಿಸಿದಾಗ ಪತ್ನಿಯೇ ಪ್ರಮುಖ ಆರೋಪಿ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ!












Click it and Unblock the Notifications