ಸ್ವ-ಇಚ್ಛೆಯಿಂದ ಮತಾಂತರ ಆದರೆ ಏನು ಮಾಡೋದು; ಯು. ಟಿ. ಖಾದರ್
ಮಂಗಳೂರು, ಡಿಸೆಂಬರ್ 13; ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕ್ರೈಸ್ತ ಧರ್ಮ ಮುಖಂಡರು, ಪ್ರತಿಪಕ್ಷ ದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ಈ ಕಾಯ್ದೆ ಒಂದು ರಾಜಕೀಯ ಗಿಮಿಕ್" ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು. ಟಿ. ಖಾದರ್ ಲೇವಡಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯು. ಟಿ. ಖಾದರ್ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. "ರಾಜ್ಯದಲ್ಲಿ ಸರ್ಕಾರ ಮತಾಂತರ ತಡೆ ಕಾನೂನು ತರಲು ಹೊರಟಿದೆ. ಇದೊಂದು ಪಕ್ಕಾ ರಾಜಕೀಯ ಗಿಮಿಕ್ ಆಗಿದೆ. ಜನರ ಗಮನ ಬೇರೆಡೆ ಸೆಳೆಯಲು ಈ ಮತಾಂತರ ವಿಷಯ ಮುನ್ನೆಲೆಗೆ ತರಲಾಗಿದೆ. ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಲಾಗುತ್ತಿದೆ" ಎಂದು ಆರೋಪಿಸಿದರು.
"ರಾಜ್ಯ ಸರಕಾರದ ವೈಫಲ್ಯವನ್ನು ಮರೆಮಾಚಲು ಬಿಜೆಪಿ ನಾಯಕರು ಮತಾಂತರದ ವಿಚಾರ ಎತ್ತಿದ್ದಾರೆ. ರಾಜ್ಯದಲ್ಲಿ ಬಡವರಿಗೆ ರೇಷನ್ ಕಾರ್ಡ್ ಸಿಗುತ್ತಿಲ್ಲ. ಬಡವರಿಗಾಗಿ ಮನೆ ಕಟ್ಟಿಕೊಡಲಾಗಿಲ್ಲ. ಕೋವಿಡ್‌ನಿಂದ ಮೃತ ಪಟ್ಟವರ ಕುಟುಂಬಗಳಿಗೆ ಪರಿಹಾರ ಈವರೆಗೂ ನೀಡಲಾಗಿಲ್ಲ. ಈ ಎಲ್ಲಾ ವಿಚಾರಗಳನ್ನು ತಪ್ಪಿಸಲು ಮತಾಂತರದ ವಿಚಾರ ತರಲಾಗಿದೆ" ಎಂದು ದೂರಿದರು.

"ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಬಿಟ್ ಕಾಯಿನ್ ವಿವಾದ ಬಗ್ಗೆ ತನಿಖೆ ಮುಂದುವರೆದಿಲ್ಲ. ಜನರು ಈ ಕುರಿತು ಯೋಚನೆ ಮಾಡದಂತೆ ಅವರ ಗಮನ ಬೇರೆಡೆಗೆ ಸೆಳೆಯಲು ಮತಾಂತರ ವಿಚಾರ ಮುನ್ನೆಲೆಗೆ ತರಲಾಗಿದೆ. ಇದೊಂದು ಅಟೆನ್ಷನ್ ಡೈವರ್ಟ್ ಸರಕಾರ . ಬಲವಂತದ ಮತಾಂತರಕ್ಕೆ ಯಾವ ಪಕ್ಷವೂ ಬೆಂಬಲ ನೀಡುವುದಿಲ್ಲ" ಎಂದರು.
"ಗ್ರಾಮ ಪಂಚಾಯತಿ ಚುನಾವಣೆ ಸಂದರ್ಭ ಗೋಹತ್ಯಾ ನಿಷೇಧ ಕಾನೂನು ವಿಚಾರ ಮುನ್ನೆಲೆಗೆ ತರಲಾಯಿತು. ಈಗ ಮತಾಂತರ ವಿಚಾರ ಚರ್ಚೆಗೆ ತರಲಾಗುತ್ತಿದೆ. ಬಲವಂತದ ಮತಾಂತರದ ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡರೆ ಅದರಲ್ಲಿ ಯಾರೂ ಮಧ್ಯಪ್ರವೇಶ ಮಾಡೋದಿಲ್ಲ. ಧಾರ್ಮಿಕ ಸ್ವಾತಂತ್ರ್ಯ ಈ ದೇಶದಲ್ಲಿದೆ. ಸ್ವಇಚ್ಛೆಯಿಂದ ಮತಾಂತರಗೊಳ್ಳುವವರನ್ನು ಏನು ಮಾಡಲಾಗೋದಿಲ್ಲ. ಬಲವಂತದ ಮತಾಂತರ ವಿರುದ್ಧ ಈಗಿರುವ ಕಾನೂನಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ" ಎಂದು ತಿಳಿಸಿದರು.
"ಕ್ರೈಸ್ತ ಸಂಘಟನೆಗಳು ಕೂಡಾ ಈ ಮತಾಂತರ ವಿರೋಧಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿವೆ. ಭಾರತೀಯ ಕ್ರೈಸ್ತ ಒಕ್ಕೂಟ ವಿರೋಧ ವ್ಯಕ್ತಪಡಿದ್ದು, ಬೆಳಗಾವಿಯಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ಮಾಡಿಲಿದೆ" ಎಂದು ಯು. ಟಿ. ಖಾದರ್ ಹೇಳಿದರು.
ಹಿಂದೂ ಸಂಘಟನೆಗಳ ಒತ್ತಡ; ಉಡುಪಿಯಲ್ಲಿ ಮಾತನಾಡಿರುವ ಭಾರತ ಕ್ರೈಸ್ತ ಒಕ್ಕೂಟದ ರಾಜ್ಯ ಅಧ್ಯಕ್ಷ ಪ್ರಶಾಂತ್ ಜತ್ತನ್ನ, "ರಾಜ್ಯದಲ್ಲಿ ಒಂದೇ ಒಂದು ಬಲವಂತದ ಮತಾಂತರಕ್ಕೆ ಸಾಕ್ಷಿ ಇಲ್ಲ. ಕ್ರೈಸ್ತ ಧರ್ಮವನ್ನು ದಮನಿಸಲು ಈ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಸರ್ಕಾರ ಕಾಯ್ದೆ ಜಾರಿ ಮಾಡಲು ಹೊರಟಿದೆ" ಎಂದರು.
"ಮತಾಂತರ ಕಾಯ್ದೆ ಜಾರಿಯಾದರೆ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಬಲವಂತದ ಮತಾಂತರಗಳು ನಡೆದರೆ ನಾವೇ ಕೇಸು ದಾಖಲಿಸ್ತೇವೆ. ಕಾಯ್ದೆ ಜಾರಿಗೆ ಬಂದರೆ ಕ್ರೈಸ್ತ ಧರ್ಮೀಯರ ಮೇಲೆ ವ್ಯವಸ್ಥಿತ ದಾಳಿ ಸಾಧ್ಯತೆಯಿದೆ. ಹೀಗಾಗಿ ಸರ್ಕಾರ ಈ ಕೂಡಲೇ ಈ ಪ್ರಸ್ತಾಪವನ್ನು ಕೈಬಿಡಬೇಕೆಂದು" ಎಂದು ಆಗ್ರಹಿಸಿದರು.












Click it and Unblock the Notifications