ಸುರತ್ಕಲ್: ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ದೃಷ್ಟಿಹೀನ ತ್ರಿವಳಿ ಸಹೋದರರು; ನೆರವಿಗೆ ಧಾವಿಸಿದ ಆಳ್ವಾಸ್
ಸುರತ್ಕಲ್ ನಿವಾಸಿಗಳಾದ ತ್ರಿವಳಿ ಸಹೋದರರು ದೃಷ್ಟಿ ಸಮಸ್ಯೆ ಇದ್ದರೂ ಕೂಡ ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದು, ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಿದ್ದಾರೆ. ಸಾಧನೆಗೈದ ತ್ರಿವಳಿ ವಿದ್ಯಾರ್ಥಿಗಳ ವಿವರ ಇಲ್ಲಿದೆ ಗಮನಿಸಿ.
ಮಂಗಳೂರು, ಫೆಬ್ರವರಿ, 10: ಶೇಕಡಾ 90ರಷ್ಟು ದೃಷ್ಟಿ ದೋಷ ಇದ್ದರೂ ಛಲ ಬಿಡದ ಸುರತ್ಕಲ್‌ನ ತ್ರಿವಳಿ ಸಹೋದರರು ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.
ಕಡು ಬಡತನದ ಜೊತೆಗೆ ದೃಷ್ಟಿ ದೋಷ ಸಮಸ್ಯೆ ತ್ರಿವಳಿ ಸಹೋದರರನ್ನು ಕಂಗಡೆಸಿತ್ತು. ಆದರೂ ಯಾವುದಕ್ಕೂ ಕುಗ್ಗದೆ ಆತ್ಮಸ್ಥೈರ್ಯದಿಂದ ಸಾಧನೆಯತ್ತ ಹೆಜ್ಜೆ ಇಟ್ಟು ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಿದ್ದಾರೆ. ಈ ಸಹೋದರರು ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ
ಇತ್ತೀಚೆಗಷ್ಟೇ ನಡೆದ ಚಾರ್ಟರ್ಡ್ ಅಕೌಂಟೆಂಟ್‌ಗಳ ಫೌಂಡೇಶನ್ ಪರೀಕ್ಷೆಯಲ್ಲಿ ಈ ತ್ರಿವಳಿ ಸಹೋದರರು ತೇರ್ಗಡೆಯಾಗಿದ್ದು, 2023 ವರ್ಷದ ಕೊನೆಯಲ್ಲಿ ನಡೆಯುವ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ತ್ರಿವಳಿ ಸಹೋದರರ ಹೆಸರು ಜಯೇಶ್, ಜೀವನ್ ಮತ್ತು ಜಿತೇಶ್. ಮೂಲತಃ ಸುರತ್ಕಲ್ ನಿವಾಸಿಗಳಾಗಿರುವ ಈ ತ್ರಿವಳಿ ಸಹೋದರರ ಪೋಷಕರು ಕಡು ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ತಂದೆ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರೆ, ತಾಯಿ ಗೃಹಿಣಿಯಾಗಿದ್ದಾರೆ. ಸುರತ್ಕಲ್‌ನಲ್ಲಿ ವಾಸವಿರುವ ಈ ತ್ರಿವಳಿ ಸಹೋದರರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂವರಿಗೂ ಉಚಿತ ಶಿಕ್ಷಣ, ಉಚಿತ ಹಾಸ್ಟೆಲ್, ಊಟದ ವ್ಯವಸ್ಥೆಯನ್ನು ಮಾಡಿದೆ.

ತ್ರಿವಳಿ ಸಹೋದರರಿಗೆ ನೆರವಾದ ಆಳ್ವಾಸ್
ಸದ್ಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಬಿಕಾಂ (ಸಿಎ ಇಂಟಿಗ್ರೇಟೆಡ್) ವ್ಯಾಸಂಗ ಮಾಡುತ್ತಿದ್ದರುವ ತ್ರಿವಳಿಗಳು, ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದರು. ಪಿಯುಸಿಯನ್ನು ಮೂವರೂ ಶೇಕಡಾ 90ರ ಅಂಕಪಟ್ಟಿಯೊಂದಿಗೆ ತೇರ್ಗಡೆಯಾಗಿದ್ದಾರೆ. ಈ ತ್ರಿವಳಿ ಸಹೋದರರ ಸಾಧನೆಯನ್ನು ಗುರುತಿಸಿ ಆಳ್ವಾಸ್ ನೆರವಿಗೆ ದಾವಿಸಿದೆ.
ಸಿಎ ಆಗಬೇಕೆಂಬ ಛಲ ಹೊಂದಿದ ಸಹೋದರರು
ಸಿಎ ಆಗಬೇಕೆಂಬ ಛಲ ಹೊಂದಿರುವ ಸಹೋದರರು ಪ್ರತಿದಿನ ಇದಕ್ಕಾಗಿ ನಾಲ್ಕು ಗಂಟೆ ಅಧ್ಯಯನ ಮಾಡುತ್ತಿದ್ದರು. ಕಲಿಕೆಯ ಜೊತೆಗೆ ಕಾಲೇಜಿನ ವಾತಾವರಣ, ಶಿಕ್ಷಕರ ಪ್ರೋತ್ಸಾಹ, ಸ್ನೇಹಿತರ ಬೆಂಬಲದೊಂದಿಗೆ ಪರೀಕ್ಷೆ ಬರೆದು ಸಾಧಿಸಲು ಸಾಧ್ಯವಾಗಿದೆ ಎಂದು ಸಹೋದರರು ಹೇಳಿದ್ದಾರೆ. ಸಿಎ ಪರೀಕ್ಷೆಯನ್ನು ಉತ್ತೀರ್ಣರಾಗಿ ಮೂವರು ಉದ್ಯೋಗದಲ್ಲಿ ಧೃಡತೆ ಹೊಂದಿ ಕುಟುಂಬವನ್ನು ಬಡತನದಿಂದ ಮುಕ್ತಿಗೊಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಹಾಸ್ಟೆಲ್‌ನಲ್ಲಿ ಒಂದೇ ಕೋಣೆಯಲ್ಲಿ ವಾಸ್ತವ್ಯವಿರುವ ಈ ಸಹೋದರರು ಸಿಎ ಪರೀಕ್ಷೆಗಾಗಿ ಯಾವುದೇ ವಿಶೇಷ ತರಗತಿ ಗಳನ್ನು ಪಡೆದುಕೊಂಡಿಲ್ಲ. ಸ್ವಂತ ಜ್ಞಾನ ಮತ್ತು ಸತತ ಅಧ್ಯಯನದ ಪರಿಣಾಮದಿಂದ ಯಾರ ನೆರವನ್ನೂ ಪಡೆಯದೇ ಸಾಧಿಸಿದ್ದಾರೆ ಎಂದು ಶಿಕ್ಷಕ ವರ್ಗ ಸಂತಸ ವ್ಯಕ್ತಪಡಿಸಿದೆ. ತ್ರಿವಳಿಗಳ ಪೈಕಿ ಜಯೇಶ್ ಮೇ ತಿಂಗಳಲ್ಲಿ ಸಿಎ ಪರೀಕ್ಷೆ ಬರೆಯಲಿದ್ದಾರೆ. ಇನ್ನಿಬ್ಬರು ನವೆಂಬರ್‌ನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಹೀಗೆ ಪ್ರಥಮ ಪ್ರಯತ್ನದಲ್ಲೇ ಗುರಿ ಮುಟ್ಟಲು ತ್ರಿವಳಿ ಸಹೋದರರು ಶ್ರಮಪಡುತ್ತಿದ್ದಾರೆ.












Click it and Unblock the Notifications