ಗೋಹತ್ಯೆ ನಿಷೇಧ ಕಾಯ್ದೆಗೆ ಒತ್ತಾಯಿಸಿದ ವಿಶ್ವಹಿಂದೂ ಪರಿಷತ್
ಮಂಗಳೂರು, ಜುಲೈ,14 : ಈಗಾಗಲೇ 24 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು, ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ತಕ್ಷಣ ಜಾರಿಗೆ ತರಬೇಕು ಎಂದು ವಿಶ್ವಹಿಂದೂ ಪರಿಷತ್ ಗೋ ರಕ್ಷಣಾ ಸಮಿತಿಯ ಅಖಿಲ ಭಾರತ ಉಪಾಧ್ಯಕ್ಷ ಹುಕುಂಚಂದ್ ಸಾವ್ಲಾ ಆಗ್ರಹಿಸಿದರು.
ವಿಶ್ವಹಿಂದೂ ಪರಿಷತ್, ಗೋ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಮಂಗಳೂರಿನಲ್ಲಿ ಸೋಮವಾರ ಗೋ ಸಂರಕ್ಷಣಾ ಬೃಹತ್ ಜಾಗೃತಿ ಜಾಥಾ ಹಾಗೂ ಪ್ರತಿಭಟನೆ ಜರುಗಿತು. ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಸಾವ್ಲಾ ಅವರು ಗೋವು ಉಳಿದರೆ ಕೃಷಿ ಮತ್ತು ದೇಶ ಎರಡೂ ಉಳಿಯುತ್ತದೆ. ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ರೂಪಿಸಿತ್ತು. ಈಗಿನ ಸರ್ಕಾರ ಅದನ್ನು ಕೈಬಿಡುವ ಧೋರಣೆ ಅನುಸರಿಸುತ್ತಿದೆ ಎಂದರು.[ಪುಣ್ಯಕೋಟಿ ನಾಡಲ್ಲಿ 'ಗೌರಿ' ಹಸುವಿಗೆ ಬಾಯಾರಿಕೆಯಾದಾಗ...]

ಮರಣದಂಡನೆಯಾಗಲಿ:
ದೇಶದಲ್ಲಿ ಮೊಘಲ್ ಸಾಮ್ರಾಜ್ಯದ ಕೊನೆ ದೊರೆ ಬಹಾದೂರ್ ಷಾ ಜಾಫರ್ ಅವರಿಗೆ 1857ರಲ್ಲಿ ಬ್ರಿಟಿಷರ ವಿರುದ್ಧ ಯುದ್ದದ ನಾಯಕತ್ವ ವಹಿಸಿಕೊಟ್ಟ ಸಂದರ್ಭ ಅವರು 3 ಘೋಷಣೆ ಮಾಡಿದ್ದರು. ಅವುಗಳೆಂದರೆ ಆಯೋಧ್ಯೆಯಲ್ಲಿ ರಾಮಮಂದಿರ, ಗೋವು ಹಂತಕರಿಗೆ ಮರಣ ದಂಡನೆ ಹಾಗೂ ಪ್ರತಿಯೋರ್ವ ವ್ಯಕ್ತಿಗೂ ಅವರವರ ಧರ್ಮಪಾಲನಾ ಹಕ್ಕು ನೀಡಿಕೆ. ಸರ್ಕಾರ ಗೋಹಂತಕರಿಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸಬೇಕು.ರಾಜ್ಯದಲ್ಲಿ ಗೋಶಾಲೆ ಆರಂಭಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಮಾಂಸ ರಫ್ತು ಮಾಡಿ ಹಾಲಿನ ಪುಡಿ ಆಮದು:
ಭಾರತ 64 ವಿದೇಶಗಳಿಗೆ ಗೋಮಾಂಸ ರಫ್ತು ಮಾಡಿ ಬದಲಿಗೆ ಹಾಲಿನ ಪುಡಿ ಆಮದು ಮಾಡಿಕೊಳ್ಳುತ್ತಿದೆ. 2010-11ರಲ್ಲಿ 7.9, 2012-13ರಲ್ಲಿ 15 ಹಾಗೂ 2013-14ರಲ್ಲಿ 20.5 ಲಕ್ಷ ಟನ್ ಮಾಂಸ ಭಾರತದಿಂದ ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಹಿಂದಿನ ಯುಪಿಎ ಸರ್ಕಾರ ವಾರ್ಷಿಕವಾಗಿ 35 ಲಕ್ಷ ಟನ್ ಮಾಂಸ ರಫ್ತುಮಾಡುವ ಗುರಿಯನ್ನು ಇರಿಸಿಕೊಂಡಿತ್ತು. ನಮ್ಮ ದೇಶದಲ್ಲಿ 86 ಲಕ್ಷ ಲೀ ಹಾಲಿನ ಕೊರತೆ ಇದೆ. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ 1,000 ಮಂದಿಗೆ 457 ಗೋವುಗಳಿದ್ದವು. ಈಗ 125 ಕೋಟಿ ಜನಸಂಖ್ಯೆಗೆ 12 ಕೋಟಿ ಗೋವುಗಳಿದ್ದು ಸರಾಸರಿ 10 ಮಂದಿಗೆ 1 ಗೋವು ಇದೆ. ದೇಶದಲ್ಲಿ ಪ್ರಸ್ತುತ 36,000ಕ್ಕೂ ಅಧಿಕ ಕಸಾಯಿಖಾನೆಗಳಿವೆ. ಕೃಷಿಗೆ ಬೇಕಾದ ಗೊಬ್ಬರ ವಿದೇಶದಿಂದ ಆಮದಾಗುತ್ತಿದ್ದು, 2013-14ರಲ್ಲಿ 14 ರಾಷ್ಟ್ರಗಳಿಂದ 15 ಲಕ್ಷ ಟನ್ ಅಮದು ಮಾಡಿಕೊಳ್ಳಲಾಗಿದೆ ಎಂದರು.[ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ : ಪೇಜಾವರ ಶ್ರೀ]
ಮನೆ ಮಂದಿಗೆಲ್ಲಾ ಬೆದರಿಸಿ ಹಟ್ಟಿಗಳಿಂದ ಗೋವನ್ನು ಒಯ್ಯಲಾಗುತ್ತಿದೆ. ಗೋಕಳ್ಳತನ, ಗೋವುಗಳ ಅಕ್ರಮ ಸಾಗಾಟ ಮುಂತಾದ ಕೃತ್ಯಗಳ ವಿರುದ್ಧ ನಿಷ್ಪಕ್ಷ, ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಅವರ ಮೇಲೆ ಒತ್ತಡ ತರುವ ಕಾರ್ಯ ನಡೆಯುತ್ತಿದೆ. ಅಕ್ರಮ ಸಾಗಾಟಗಾರರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಹೇಳಿದರು.
ಪ್ರಾಂತ ಗೋರಕ್ಷಾ ಪ್ರಮುಖ ಕಟೀಲು ದಿನೇಶ್ ಪೈ, ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಸಂಚಾಲಕ ಭುಜಂಗ ಕುಲಾಲ್, ವಿಶ್ವಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಮೂರ್ತಿ, ಮಂಗಳೂರು ಕಾರ್ಯದರ್ಶಿ ಗೋಪಾಲ್ ಕುತ್ತಾರ್ ಉಪಸ್ಥಿತರಿದ್ದರು.












Click it and Unblock the Notifications