ಮೂಡಬಿದ್ರೆ:ಚಿರತೆ ಮರಿ ರಕ್ಷಣೆಗೆ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಪಶುವೈದ್ಯೆ
30 ಅಡಿಗಿಂತಲೂ ಆಳವಾದ ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಲು ಪಶುವೈದ್ಯೆ ಡಾ. ಮೇಘನಾ ಪ್ರಾಣವನ್ನೇ ಪಣಕಿಟ್ಟು ಬೋನಿನೊಳಗೆ ಕೂತು ಬಾವಿಗೆ ಇಳಿದಿರುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.
ಮಂಗಳೂರು, ಫೆಬ್ರವರಿ 14: ಬಾವಿಯೊಂದಕ್ಕೆ ಬಿದ್ದ ಒಂದು ವರ್ಷ ಪ್ರಾಯದ ಚಿರತೆ ಮರಿಯನ್ನು ಬೋನಿನಲ್ಲಿ ಕುಳಿತು ಬಾವಿಗಿಳಿದು ರಕ್ಷಿಸಿದ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನ ಪಶುವೈದ್ಯೆಯ ಸಾಹಸಕ್ಕೆ ಅರಣ್ಯ ಇಲಾಖೆ ಸಹಿತ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ನಿಡ್ಡೋಡಿ ಎಂಬಲ್ಲಿ ಎರಡು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಚಿರತೆ ಮರಿಯನ್ನು ಸೆರೆಹಿಡಿದು ಮೇಲಕ್ಕೆ ತರಲು ಅರಣ್ಯ ಇಲಾಖೆಯವರು ಬಹಳಷ್ಟು ಪ್ರಯತ್ನ ಪಟ್ಟಿದ್ದರೂ ಸಾಧ್ಯವಾಗಿರಲಿಲ್ಲ.
30 ಅಡಿಗಿಂತಲೂ ಆಳವಾದ ಬಾವಿಯ ಒಳಗೆ ಗುಹೆಯಂತಿರುವಲ್ಲಿ ಈ ಚಿರತೆ ಮರಿ ಅಡಗಿಕೊಳ್ಳುತ್ತಿತ್ತು. ಇಳಿಸಿದ ಬೋನಿನೊಳಗೂ ಬರಲು ಹಿಂದೇಟು ಹಾಕುತ್ತಿತ್ತು. ಆಗ ಅರಣ್ಯ ಇಲಾಖೆಯೊಂದಿಗೆ ನಿರಂತರ ಸಹಚರ್ಯ ಹೊಂದಿರುವ ಸ್ವಯಂಸೇವಾ ಸಂಸ್ಥೆ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನ ತಜ್ಞ ವೈದ್ಯರು ಸ್ಥಳಕ್ಕಾಗಮಿಸಿದರು. ಸಂರಕ್ಷಣಾ ತಂಡದ ಡಾ. ಮೇಘನಾ ಪೆಮ್ಮಯ್ಯ ಅವರು ಅರಿವಳಿಕೆ ಮದ್ದು ತುಂಬಿದ ಡಾರ್ಟ್ ಗನ್ ಹಿಡಿದುಕೊಂಡು ಬೋನಿನೊಳಗೆ ಕುಳಿತರು. ಅರಣ್ಯ ಇಲಾಖೆಯ ಸಿಬಂದಿ, ಊರವರು ಸೇರಿಕೊಂಡು ಅವರನ್ನು ಬಾವಿಗಿಳಿಸಿದ್ದಾರೆ.

ಡಾ. ಮೇಘನಾ ಪೆಮ್ಮಯ್ಯ ಚಿರತೆ ಮರಿಯನ್ನು ಸೆರೆಹಿಡಿಯಲು ಬಾವಿಗಿಳಿದದ್ದು ರೋಮಾಂಚಕವಾಗಿತ್ತು. ಹೀಗೆ ಬಾವಿಗೆ ಇಳಿದ ಡಾ. ಮೇಘನಾ ಗುಹೆಯೊಳಗೆ ಕುಳಿತ ಚಿರತೆ ಮರಿಯತ್ತ ಗುರಿ ಇಟ್ಟು ಅರಿವಳಿಕೆ ಚುಚ್ಚುಮದ್ದನ್ನು ಪ್ರಯೋಗಿಸಿದರು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಅರಣ್ಯ ಇಲಾಖೆಯ ಸಿಬಂದಿ ಹಗ್ಗದ ಮೂಲಕ ಕೆಳಗಿಳಿದು ಹೆಣ್ಣು ಚಿರತೆ ಮರಿಯನ್ನು ರಕ್ಷಿಸಿದ್ದಾರೆ. ಬಳಿಕ ಡಾ. ಮೇಘನಾ ಚಿರತೆ ಮರಿಯೊಂದಿಗೆ ಬೋನಿನಲ್ಲಿಯೇ ಬಾವಿಯಿಂದ ಮೇಲಕ್ಕೆ ಬಂದರು.
ಮೂಡಬಿದ್ರೆಯಲ್ಲಿ ಚಿರತೆ ಮರಿ ರಕ್ಷಣೆಗೆ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಪಶುವೈದ್ಯೆ#Leopard #Mudbidri #Veterinarian #ಒನ್ಇಂಡಿಯಾಕನ್ನಡಸುದ್ದಿ pic.twitter.com/eDttVFh5Hk
— oneindiakannada (@OneindiaKannada) February 14, 2023
ಚಿರತೆಯನ್ನು ಸೂಕ್ತವಾಗಿ ಬಂಧಿಸಿ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಿ ಅದು ಚೇತರಿಸುತ್ತಿದ್ದಂತೆಯೇ ಅದನ್ನು ಅರಣ್ಯ ಇಲಾಖೆಯವರು ದಟ್ಟ ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.
ಡಾ. ಯಶಸ್ವಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ತಂಡದಲ್ಲಿ ಡಾ. ಮೇಘನಾ ಜೊತೆಗೆ ಡಾ. ಪೃಥ್ವಿ, ಡಾ. ನಫೀಸಾ ಭಾಗಿಯಾಗಿದ್ದರು. ಅರಣ್ಯ ಸಂರಕ್ಷಣಾಕಾರಿ ಸತೀಶ್ ಎನ್, ವಲಯ ಅರಣ್ಯಾಕಾರಿ ಹೇಮಗಿರಿ ಅಂಗಡಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ ಹಾಗೂ ಸಿಬಂದಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗುವಲ್ಲಿ ಸತತ ಪ್ರಯತ್ನಪಟ್ಟಿದ್ದಾರೆ.












Click it and Unblock the Notifications