ಆರೋಗ್ಯ ಸಚಿವ ಖಾದರ್ ರೈಲ್ವೆ ಆಲೋಚನೆಗಳೇನು?
ನವದೆಹಲಿ, ಜೂನ್ 5: ನೂತನ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರನ್ನು ಮೂರು ದಿನಗಳಿಂದ ನಿರಂತರವಾಗಿ ಅವರ ಹಿತೈಷಿಗಳು ಭೇಟಿ ಮಾಡಿ ಶುಭಾಶಯ ಹೇಳುತ್ತಿದ್ದಾರೆ. ಇವರಲ್ಲಿ ಕರ್ನಾಟಕದ ಜನಪ್ರತಿನಿಧಿಗಳು ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ತಮ್ಮ ದಕ್ಷಿಣ ಜಿಲ್ಲೆ ಭಾಗದ ಸಚಿವ ಯುಟಿ ಖಾದರ್ ಅವರನ್ನು ಭೇಟಿ ಮಾಡಿದ್ದಾರೆ. ಜತೆಗೆ, ರಾಜ್ಯದ ಮತ್ತೊಬ್ಬ ಪ್ರಭಾವಿ ಸಚಿವ ಡಿಕೆ ಶಿವಕುಮಾರ್ ಸಹ ಖಾದರ್ ಜತೆಗೂಡಿ ಸದಾನಂದ ಗೌಡರನ್ನು ಮೊನ್ನೆ ಆತ್ಮೀಯವಾಗಿ ಅಭಿನಂದಿಸಿದ್ದಾರೆ.
ಸದಾನಂದ ಗೌಡ-ಖಾದರ್-ಡಿಕೆಶಿ ತ್ರಿಸಂಗಮ: (ಹೈಸ್ಪೀಡ್ ರೈಲು ಮೋದಿ ಅವರ ಕನಸು: ಡಿವಿಎಸ್)
ಇದೇ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್ ಅವರು ರೈಲ್ವೆ ಸಚಿವ ಡಿವಿ ಸದಾನಂದ ಗೌಡರಿಗೆ ವಿಶೇಷ ಮನವಿಯೊಂದನ್ನು ಸಲ್ಲಿಸಿದ್ದಾರೆ. ಇಬ್ಬರೂ ಒಂದೇ ಜಿಲ್ಲೆಯವರಾಗಿದ್ದು, ಗೌಡರೂ ಸಹ ಮುತುವರ್ಜಿ ವಹಿಸಿ, ಜಿಲ್ಲೆಗಾಗಿ ಖಾದರ್ ಅವರು ಮಂಡಿಸಿರುವ ಅಹವಾಲುಗಳನ್ನು ಆಲಿಸಿದ್ದಾರೆ. ಫಲಿತಾಂಶ... ಮುಂದಿನ ಬಜೆಟ್ಟಿನಲ್ಲಿ ಬಹಿರಂಗವಾಗಲಿದೆ.
ಇಷ್ಟಕ್ಕೂ ದಕ್ಷಿಣ ಕನ್ನಡ ಭಾಗಕ್ಕೆ ಖಾದರ್ ಅವರ ರೈಲ್ವೆ ಆಲೋಚನೆಗಳೇನು?:

* ಮಂಗಳೂರಿನಲ್ಲಿ ಶೀಘ್ರವೇ ಪ್ರತ್ಯೇಕ ರೈಲ್ವೆ ವಿಭಾಗೀಯ ಕೇಂದ್ರವನ್ನು ಸ್ಥಾಪಿಸುವುದು.
* ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಮಂಗಳೂರು- ಮಣಿಪಾಲ್ ಮತ್ತು ಮಂಗಳೂರು- ಕೊಣಾಜೆ ನಡುವೆ ಶೈಕ್ಷಣಿಕ ರೈಲ್ವೆ ಕಾರಿಡಾರ್.
* ತಮ್ಮ ಕ್ಷೇತ್ರದಲ್ಲಿರುವ ಸೋಮೇಶ್ವರ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಆದ್ಯತೆ ನೀಡುವುದು.
* ತೊಕ್ಕಟ್ಟು ಬಳಿ ನಡೆದಾಡಲು ಮೇಲ್ಸೇತುವೆ ನಿರ್ಮಾಣ.
ಗಮನಾರ್ಹವೆಂದರೆ ರೈಲ್ವೆ ಸಚಿವರಾದ ನಂತರ ಮೊದಲ ಬಾರಿಗೆ ತವರು ಜಿಲ್ಲೆಗೆ ಬಂದಿದ್ದಾಗ ಮಂಗಳೂರು ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ತಮ್ಮ ಆದ್ಯತೆಯೂ ಆಗಿದೆ ಎಂದು ಸದಾನಂದ ಗೌಡರು ಹೇಳಿದ್ದರು. ಜತೆಗೆ, ಹಿಂದಿನಿಂದಲೂ ಈ ಬೇಡಿಕೆಯನ್ನು ಮುಂದಿಟ್ಟು ಸದಾನಂದ ಗೌಡರು ಅನೇಕ ಚಳವಳಿಗಳನ್ನು ನಡೆಸಿದ್ದಾರೆ.












Click it and Unblock the Notifications