ನಾಗಾರಾಧನೆಗೆ ಹಿಂದೂ ಕುಟುಂಬಕ್ಕೆ ಉಚಿತವಾಗಿ ಜಮೀನು ಕೊಟ್ಟ ಯುಟಿ ಖಾದರ್
ದಕ್ಷಿಣ ಕನ್ನಡ ಜಿಲ್ಲೆ ಅಂದಾಕ್ಷಣ ಕೋಮು ಗಲಭೆ, ಹಿಂದೂ ಮುಸ್ಲಿಂ ರಾಜಕೀಯ ಹೆಚ್ಚು ಸುದ್ದಿಯಾಗುತ್ತದೆ. ಇದೆಲ್ಲದರ ಹೊರತಾಗಿಯೂ ಅಲ್ಲಿ ಹಿಂದೂ-ಮುಸ್ಲಿಂರು ಸೌಹಾರ್ದಯುತವಾಗಿ ಬಾಳ್ವೆ ಮಾಡುತ್ತಿದ್ದಾರೆ. ನಾಗಾರಾಧನೆ ಈ ಭಾಗದ ಶ್ರೇಷ್ಠ ಆಚರಣೆಗಳಲ್ಲೊಂದು, ಅಂತಹ ನಾಗಾರಧನೆಗಾಗಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹಿಂದೂ ಕುಟುಂಬಕ್ಕೆ ಜಮೀನು ಬಿಟ್ಟುಕೊಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕದಲ್ಲಿ ಯು.ಟಿ.ಖಾದರ್ ಅವರಿಗೆ ಸೇರಿದ ಪಿತ್ರಾರ್ಜಿತ ಜಮೀನು ಇದೆ. ಹಲವು ತಲೆಮಾರುಗಳಿಂದ ಅಲ್ಲಿ ನಾಗಾರಾಧನೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ನಂತರದ ದಿನಗಳಲ್ಲಿ ಈ ಜಮೀನು ಯು.ಟಿ ಖಾದರ್ ಅಜ್ಜ ಮಹಮ್ಮದ್ ಹಾಜಿ ಅವರ ಒಡೆತನಕ್ಕೆ ಸೇರಿದೆ. ಅದರಲ್ಲಿ ಅಡಿಕೆ, ತೆಂದಿನ ತೋಟ ಮಾಡಿದ್ದಾರೆ. ಆ ಜಮೀನಿನ ಒಂದು ಭಾಗದಲ್ಲಿ ಇಂದಿಗೂ ನಾಗಾರಾಧನೆ ನಡೆಸಲಾಗುತ್ತದೆ.

ಈಗ ಯುಟಿ ಖಾದರ್ ಅವರ ಒಡೆತನದಲ್ಲಿರುವ ಜಮೀನು ಈ ಮೊದಲು ದಳವಾಯಿ ಕುಟುಂಬದ ಒಡೆತನದಲ್ಲಿತ್ತು. ಭೂಮಸೂದೆ ಕಾನೂನು ಬಂದ ಬಳಿಕ ಖಾದರ್ ಕುಟುಂಬದ ಹಿರಿಯರಿಗೆ ಸಿಕ್ಕಿತ್ತು, ಜಮೀನು ಭಾಗವಾದ ನಂತರ ಅದು ಪಿತ್ರಾರ್ಜಿತ ಆಸ್ತಿಯಾಗಿ ಖಾದರ್ ಅವರ ಪಾಲಿಗೆ ಬಂದಿದೆ. ದಳವಾಯಿ ಕುಟುಂಬದ ನಾಗಾರಾಧನೆ ಮಾಡುವ ಕಟ್ಟೆ ಅದೇ ಜಮೀನಿನಲ್ಲಿ ಇತ್ತು.
20 ಸೆಂಟ್ಸ್ ಜಮೀನು ದಾನ ಮಾಡಿದ ಖಾದರ್
ನಾಗರಾಧನೆ ಸ್ಥಳ ಮುಸ್ಲಿಂ ಒಡೆತನದ ಜಮೀನನಲ್ಲಿ ಇದ್ದ ಕಾರಣ ದಳವಾಯಿ ಕುಟುಂಬ ಬೇರೆ ಸ್ಥಳದಲ್ಲಿ ನಾಗಾರಾಧನೆ ಮಾಡುತ್ತಿದ್ದರು. ಮೂಲ ಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆ ನಿಂತುಹೋಗಿತ್ತು, ಇದರಿಂದ ದಳವಾಯಿ ಕುಟುಂಬಕ್ಕೆ ಸಮಸ್ಯೆ ಕಾಡುತ್ತಿತ್ತು.
ದಳವಾಯಿ ಕುಟುಂಬದವರು ಈ ಬಗ್ಗೆ ಅಷ್ಟಮಂಗಲ ಪ್ರಶ್ನೆ ಇಟ್ಟಾಗ ಮೂಲ ಜಾಗದಲ್ಲಿ ನಾಗಾರಾಧನೆ ನಡೆಯಬೇಕೆಂದು ಬಂದಿದೆ. ಆದರೆ ಮೂಲ ಜಮೀನು ಖಾದರ್ ಒಡೆತನದಲ್ಲಿದ್ದ ಕಾರಣ ದಳವಾಯಿ ಕುಟುಂಬಕ್ಕೆ ಮತ್ತೆ ಸಮಸ್ಯೆ ಎದುರಾಗಿದೆ.
ಬೇರೆ ದಾರಿ ಇಲ್ಲದ ಕಾರಣ ದಳವಾಯಿ ಕುಟುಂಬ ನಾಗನಕಟ್ಟೆ ಇರುವ 10 ಸೆಂಟ್ಸ್ ಸ್ಥಳವನ್ನು ಖರೀದಿ ಮಾಡಲು ಮುಂದಾಗಿದೆ. ಯು.ಟಿ. ಖಾದರ್ ಅವರಿಗೆ ವಿಚಾರವನ್ನು ತಿಳಿಸಿ ಜಮೀನು ನೀಡುವಂತೆ ಮನವಿ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಖಾದರ್ 10 ಸೆಂಟ್ಸ್ ಬದಲಾಗಿ 20 ಸೆಂಟ್ಸ್ ಜಾಗವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ. ಇದರೊಂದಿಗೆ ಮೂಲಸ್ಥಾನದಲ್ಲಿ ನಾಗಾರಧನೆ ನಡೆಯಲು ಅನುವು ಮಾಡಿಕೊಟ್ಟಿದ್ದಾರೆ.
ಪುಣಚದಲ್ಲಿ ಪ್ರತಿ ವರ್ಷ ನಾಗರಪಂಚಮಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ದಳವಾಯಿ ಕುಟುಂಬಸ್ಥರು ಅಲ್ಲಿ ಬಂದು ಸೇರುತ್ತಾರೆ. ಮುಸ್ಲಿಂ ಒಡೆತನೆ 12 ಎಕರೆ ಜಮೀನಿನ ಮಧ್ಯ ನಾಗಾರಧನೆ ನಡೆಯುವುದು ಇಲ್ಲಿನ ವಿಶೇಷವಾಗಿದೆ.












Click it and Unblock the Notifications