ಪುತ್ತೂರಿನ ಮದುವೆ ಕಾರ್ಯಕ್ರಮಕ್ಕೆ ಬಂದ ಯೋಗಿ ಆದಿತ್ಯನಾಥ್!
ಮಂಗಳೂರು, ಜುಲೈ 10: ಆ ಮದುವೆ ಮನೆಯಲ್ಲಿ ಸಡಗರವಿತ್ತು, ಸಂಭ್ರಮವಿತ್ತು. ನೂತನ ವಧುವರರು ಹೊಸ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿದ್ದರು. ಮನೆ ಮಂದಿ, ಕುಟುಂಬಿಕರು ಸಂತೋಷದ ಸಾಗರದಲ್ಲಿ ತೇಲಾಡುತ್ತಿದ್ದರೆ, ಅಲ್ಲಿಗೆ ಯೋಗಿ ಆದಿತ್ಯನಾಥ್ ಧಿಡೀರ್ ಭೇಟಿ ನೀಡಿದರು.
ಹತ್ತಾರು ಜನ ಹಿಂಬಾಲಕರು, ಭಧ್ರತಾ ಸಿಬ್ಬಂದಿ ಕೂಡಾ ಇದ್ದರು. ಎಲ್ಲರೂ ಏನಾಗುತ್ತಿದೆ ಅಂತಾ ನೋಡುವಷ್ಟರಲ್ಲೇ ವೇದಿಕೆ ಮೇಲೇರಿದ ಯೋಗಿ ನೂತನ ವಧುವರರಿಗೆ ಆಶೀರ್ವದಿಸಿದ್ದಾರೆ. ಒಂದು ಕ್ಷಣ ಅವಕ್ಕಾದ ಜನರಿಗೆಲ್ಲಾ ಮತ್ತೆ ಗೊತ್ತಾಗಿದ್ದು, ಇದು ಯೋಗಿ ಆದಿತ್ಯನಾಥ್ ಅಲ್ಲ, ಯೋಗಿ ತರನೇ ಇರುವ ವ್ಯಕ್ತಿ ಅಂತಾ.
ಇಂತಹ ಆಶ್ಚರ್ಯಕರ ದೃಶ್ಯ ಕಂಡು ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬ ಊರಿನಲ್ಲಿ. ದೊಡ್ಡಡ್ಕದ ರತ್ನಾವತಿ ಮತ್ತು ನಾರಾಯಣ ಎಂಬ ದಂಪತಿಯ ಪುತ್ರ ಲೋಕೇಶ್ ಬಲ್ಯಾಯ ವಿವಾಹ ಕಾರ್ಯಕ್ರಮ ವರನ ಮನೆಯಲ್ಲಿ ನಡೆಯುತ್ತಿತ್ತು.

ಕಾವ್ಯಶ್ರೀ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲೋಕೇಶ್‌ಗೆ ಯೋಗಿಯ ಗೆಟಪ್‌ನಲ್ಲಿ ಬಂದು ಸರ್ಪ್ರೈಸ್ ಕೊಟ್ಟಿದ್ದು ದೊಡ್ಡಡ್ಕದ ಸುಬ್ರಹ್ಮಣ್ಯ ಬಲ್ಯಾಯ ಎಂಬುವವರು.

ಜುಲೈ 7ರಂದು ಈ ಮದುವೆ ಕಾರ್ಯಕ್ರಮ ನಡೆದಿದ್ದು, ಸಿಮೀತ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಏನಾದರೂ ಒಂದು ವಿಭಿನ್ನವಾಗಿ ಇರಬೇಕು ಅಂತಾ ಯೋಚಿಸಿದ ಸುಬ್ರಹ್ಮಣ್ಯ ಯೋಗಿ ಗೆಟಪ್‌ನಲ್ಲಿ ಮದುವೆ ಮನೆಗೆ ಪ್ರವೇಶಿಸಿದ್ದಾರೆ. ಸುಬ್ರಹ್ಮಣ್ಯರಿಗೆ ಅಂಗರಕ್ಷಕ ಮತ್ತು ಸಂಗಡಿಗರಾಗಿ ಹಲವರು ಸಾಥ್ ನೀಡಿದರು. ಈ ಎಲ್ಲಾ ದೃಶ್ಯವನ್ನು ಛಾಯಾಗ್ರಾಹಕ ಅರುಣ್ ಪುತ್ತೂರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications