ಪಣಂಬೂರು ಬೀಚಲ್ಲಿ ಮುಳುಗುತ್ತಿದ್ದ ಇಬ್ಬರು ಬೆಂಗಳೂರಿಗರ ರಕ್ಷಣೆ
ಮಂಗಳೂರು, ಅಕ್ಟೋಬರ್ 2: ಮಳೆಯಿಂದಾಗಿ ಪ್ರಕ್ಷುಬ್ಧಗೊಂಡಿರುವ ಕಡಲಿನಲ್ಲಿ ನೀರಾಟ ಆಡಲು ಇಳಿದು ಅಪಾಯಕ್ಕೆ ಸಿಲುಕಿದ್ದ ಇಬ್ಬರು ಯುವಕರನ್ನು ಜೀವ ರಕ್ಷಕ ದಳದವರು ರಕ್ಷಿಸಿದ ಘಟನೆ ಪಣಂಬೂರು ಬೀಚಿನಲ್ಲಿ ನಡೆದಿದೆ. ಭಾನುವಾರ ಈ ಘಟನೆ ನಡೆದಿದೆ.
ಬೆಂಗಳೂರಿನ ದಾಸರಹಳ್ಳಿ ನಿವಾಸಿಗಳಾದ ಸಾದಿಕ್ (21) ಹಾಗೂ ನರಸಿಂಹ ಮೂರ್ತಿ(19) ಎಂಬುವರನ್ನು ಜೀವರಕ್ಷಕ ದಳದವರು ರಕ್ಷಿಸಿದ್ದಾರೆ.

ದಸರಾ ರಜೆಯ ಪ್ರಯುಕ್ತ ಬೆಂಗಳೂರಿನಿಂದ ನಾಲ್ಕು ಮಂದಿ ಗೆಳೆಯರ ತಂಡ ಪ್ರವಾಸಕ್ಕೆಂದು ಮಂಗಳೂರಿಗೆ ಆಗಮಿಸಿತ್ತು. ಮಂಗಳೂರಿನಲ್ಲಿ ದೇವಾಲಯಗಳನ್ನು ಸುತ್ತಾಡಿ ನಂತರ ಪಣಂಬೂರು ಬೀಚಿಗೆ ಭೇಟಿ ನೀಡಿದ ಗೆಳೆಯರ ತಂಡ ಭಾನುವಾರ ಮಧ್ಯಾಹ್ನ ಪಣಂಬೂರು ಬೀಚಿಗೆ ಬಂದಿತ್ತು.
ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿತ್ತು. ಈ ಸಂದರ್ಭದಲ್ಲಿ ಜೀವ ರಕ್ಷಕ ದಳದವರು ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಯುವಕರ ತಂಡ ಪ್ರಕ್ಷುಬ್ಧ ಕಡಲಲ್ಲಿ ನೀರಾಟ ಆಡಲು ಇಳಿದಿದೆ .
ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಸಾದಿಕ್ ಹಾಗೂ ನರಸಿಂಹಮೂರ್ತಿ ಅಪಾಯಕ್ಕೆ ಸಿಲುಕಿದ್ದರು. ಇವರನ್ನು ಜೀವ ರಕ್ಷಕ ದಳವರು ರಕ್ಷಿಸಿದ್ದಾರೆ .
ಸೆಪ್ಟೆಂಬರ್ 29 ರಿಂದ ಇಂದಿನವರೆಗೆ ಪಣಂಬೂರು ಬೀಚ್ ನಲ್ಲಿ ನೀರಿಗಿಳಿದು ಅಪಾಯಕ್ಕೆ ಸಿಲುಕಿದ್ದ 10 ಮಂದಿ ಪ್ರವಾಸಿಗರನ್ನು ಜೀವರಕ್ಷಕರ ತಂಡ ರಕ್ಷಿಸಿದೆ.












Click it and Unblock the Notifications