ತುಳು ನೆಲದ ಸಂಸ್ಕೃತಿ ರಕ್ಷಿಸಬಲ್ಲದು : ಪ್ರಭಾಕರ ಭಟ್
ಮಂಗಳೂರು, ಡಿ. 18: ತುಳು ಸಂಸ್ಕೃತಿಯು ನಮ್ಮ ಮಾತೃತನದ ಭಾವ ಉಳಿಸಿ, ಸಂಬಂಧಗಳು ಬೆಸೆಯಲು ಪೂರಕವಾಗಿವೆ. ಆದರೆ, ವಿದೇಶಿ ಸಂಸ್ಕೃತಿ ಅನುಕರಣೆಯಿಂದ ನಾವು ಮಾತೆಯನ್ನು ಮರೆಯುತ್ತಿದ್ದೇವೆ, ಸಂಬಂಧಗಳನ್ನು ದೂರೀಕರಿಸುತ್ತಿದ್ದೇವೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಪ್ರಭಾಕರ ಭಟ್ ಆತಂಕ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಗರೋಡಿಯಲ್ಲಿ ಆಯೋಜಿಸಿದ್ದ ತುಳು ತಾಳಮದ್ದಲೆ ಪರ್ಬದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ತುಳು ಭಾಷೆಯಲ್ಲೇ ತಾಳಮದ್ದಲೆ ನಡೆದದ್ದು ಶ್ಲಾಘನೀಯ. ತುಳು ಭಾಷೆಯನ್ನು ಬೆಳೆಸಿ, ಅನುಸರಿಸುವುದರಿಂದ ನಮ್ಮಲ್ಲಿ ಮಣ್ಣಿನ ಬಗ್ಗೆ, ನಮ್ಮ ಹಿರಿಯರ ಬಗ್ಗೆ ಗೌರವ ಹೆಚ್ಚುತ್ತದೆ ಎಂದರು. [ಸಂಸ್ಕೃತಿ, ಪರಂಪರೆ ಸಾರಿಗೆ ತುಳುವರೆ ಪರ್ಬ]

ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ನಿಕ್ ಸಮಾರಂಭಕ್ಕೆ ಶುಭ ಕೋರಿದರು. ಧರ್ಮಸ್ಥಳದ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರೊ. ಎಂ.ಬಿ. ಪುರಾಣಿಕ್, ಬಿಲ್ಲವ ಸೇವಾ ಸಂಘ, ಬಂಟ್ವಾಳದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ತಾರಾನಾಥ ಶೆಟ್ಟಿ ಬೋಳಾರ, ವಾಸು ಶಾಂತಿ, ಪೂವಪ್ಪ ಶಾಂತಿ, ಗರೋಡಿಯ ಅಧ್ಯಕ್ಷ ಚಿತ್ತರಂಜನ್, ಚಂದ್ರಶೇಖರ ಸುವರ್ಣ, ದೋಗ್ರ ಪೂಜಾರಿ, ಸ್ಮಾರಕ ಯಕ್ಷಗಾನ ಕೇಂದ್ರದ ಅಧ್ಯಕ್ಷ ದಾಮೋದರ ನಿಸರ್ಗ ಬಿ., ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಪಾಲ್ಗೊಂಡಿದ್ದರು. [ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನದ ಗುರಿ]
ಹೇಮಾ ದಾಮೋದರ ಕಾರ್ಯಕ್ರಮ ಪ್ರಾಯೋಜಿಸಿದ್ದರು. 90 ವರ್ಷಗಳಿಂದ ಕಾರ್ಯನಿರತವಾಗಿರುವ 'ಶ್ರೀ ಜಗದಂಬಿಕಾ ಯಕ್ಷಗಾನ ಮಂಡಳಿ ಉರ್ವ ಮಾರಿಗುಡಿ' ಸಂಸ್ಥೆಯನ್ನು ಸನ್ಮಾನಿಸಲಾಯಿತು. ಮಂಡಳಿ ಪರವಾಗಿ ಅಶೋಕ್ ಬಿ.ಎನ್. ಸನ್ಮಾನ ಸ್ವೀಕರಿಸಿದರು.
ತುಳು ತಾಳಮದ್ದಲೆ ಪರ್ಬ ಸಮಿತಿ ಸಂಯೋಜಕ ರವಿ ಅಲೆವೂರಾಯ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಎಚ್.ಪಿ. ರೂಪಾ ರಾಧಾಕೃಷ್ಣ ರಾವ್ ಸನ್ಮಾನ ಪತ್ರ ಓದಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಜಿಲ್ಲೆಯ ಕಲಾವಿದರಿಂದ 'ಕೋಟಿ ಚೆನ್ನಯ್ಯ' ಪ್ರಸಂಗದ ಪ್ರಸ್ತುತಿ ನಡೆಯಿತು.












Click it and Unblock the Notifications