ರೆಸಾರ್ಟ್‌ನ ಈಜುಕೊಳದಲ್ಲಿ ಕುಳಿತಿದ್ದ ಯಮರಾಜ: ಮೈಸೂರಿನ 3 ಯುವತಿಯರ ಪ್ರಾಣ ತೆಗೆದೇ ಬಿಟ್ಟ!
ಮಂಗಳೂರು ನವೆಂಬರ್ 17: ರೆಸಾರ್ಟ್‌ನ ಈಜುಕೊಳದಲ್ಲಿ ಈಜಲು ಹೋಗಿದ್ದ ಮೈಸೂರಿನ ಮೂವರು ಯುವತಿಯರು ದುರ್ಮಣ ಹೊಂದಿದ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ. ವಾರಾಂತ್ಯದ ಪ್ರವಾಸಕ್ಕೆಂದು ತೆರಳಿದ್ದ ಯುವತಿಯರು ರೆಸಾರ್ಟ್‌ನಲ್ಲಿದ್ದ ಈಜುಕೊಳದಲ್ಲಿ ಈಜಲು ಹೋದಾಗ ಏಕಾಏಕಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಮೈಸೂರು ರಾಮನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ಮೈಸೂರು ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ(21), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಎಂದು ಗುರುತಿಸಲಾಗಿದೆ. ಮೃತ ಯುವತಿಯರು ವಾರಾಂತ್ಯದ ಮೋಜು ಮಸ್ತಿಗಾಗಿ ಮೈಸೂರಿನಿಂದ ಮಂಗಳೂರು ಪ್ರವಾಸ ಕೈಗೊಂಡಿದ್ದರು.

ಕಳೆದ ದಿನ (ನವೆಂಬರ್ 16) ಮಂಗಳೂರು ಬೀಚ್ ಬಳಿ ಇದ್ದ ರೆಸಾರ್ಟ್‌ನಲ್ಲಿ ರೂಮ್ ಪಡೆದಿದ್ದ ಯುವತಿಯರು ಇಂದು ಬೆಳಗ್ಗೆ (ನವೆಂಬರ್ 17) ರೂಮ್ ಚೆಕ್ ಔಟ್ ಮಾಡಬೇಕಿತ್ತು. ಆದರೆ ಈಜುಕೊಳದ ಒಳಗೆ ಕಾದು ಕುಳಿತಿದ್ದ ಯಮರಾಜನ ಕೂಗು ಈ ಮೂವರಲ್ಲಿ ಅದ್ಯಾರಿಗೆ ಮೊದಲು ಕೇಳಿಸಿತೋ ಗೊತ್ತಿಲ್ಲ. ಚೆಕ್ ಔಟ್ ಗೂ ಮುನ್ನ ಬೆಳಿಗ್ಗೆ ರೆಸಾರ್ಟ್‌ನಲ್ಲಿ ಇದ್ದ ಈಜುಕೊಳದಲ್ಲಿ ಆಡಲು ಈ ಮೂವರು ಯುವತಿಯರು ಇಳಿದಿದ್ದಾರೆ. ನೀರಿನ ಆಳ ತಿಳಿಯದೇ ನೀರಿಗೆ ಇಳಿದ ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಈಜುಕೊಳದ ಒಂದು ಭಾಗ ಸುಮಾರು ಆರು ಅಡಿಯಷ್ಟು ಆಳವಿರುತ್ತದೆ. ಇದನ್ನು ಅರಿಯದ ಯುವತಿಯರೂ ಆಳದ ಭಾಗಕ್ಕೆ ಹೋಗಿದ್ದಾರೆ. ಈ ವೇಳೆ ಓರ್ವ ಯುವತಿ ಆಯತಪ್ಪಿ ಬಿದ್ದಿದ್ದಾಳೆ. ಆಗ ಆಕೆಯ ರಕ್ಷಣೆಗೆ ಮುಂದಾದ ಇನ್ನಿಬ್ಬರು ಯುವತಿಯರು ಮುಳುಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಒಬ್ಬ ಯುವತಿ ಮುಳುಗುವಾಗಲೇ ಎಚ್ಚೆತ್ತು ಸಿಬ್ಬಂದಿಯನ್ನ ಕರೆದಿದ್ದರೆ ಬಹುಶ: ಈ ಮೂವರ ಪ್ರಾಣ ಉಳಿಯುತ್ತಿತ್ತೇನೋ. ಆದರೆ ಆತುರದಲ್ಲಿ ಗೆಳತಿಯ ರಕ್ಷಣೆಗೆ ಮುಂದಾದ ಇನ್ನಿಬ್ಬರ ಪ್ರಾಣ ಕೂಡ ಯಮರಾಜ ತೆಗೆದುಬಿಟ್ಟಿದ್ದಾನೆ.
ಈ ಘಟನೆ ನಡೆದಾಗ ರೆಸಾರ್ಟ್ ಸಿಬ್ಬಂದಿಗಳ್ಯಾರೂ ಕೂಡ ಈಜುಕೊಳದ ಬಳಿ ಇರಲಿಲ್ಲ. ಹೀಗಾಗಿ ಘಟನೆ ಕೊಂಚ ಸಮಯದ ನಂತರ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರಿಸಿದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್, 'ಒಬ್ಬ ಯುವತಿ ಆಳದ ಪ್ರದೇಶಕ್ಕೆ ಹೋಗಿದ್ದಾಳೆ. ಆಗ ಆಕೆ ಸಿಕ್ಕಿಕೊಂಡಿದ್ದರಿಂದ ಇನ್ನಿಬ್ಬರೂ ನೀರಿಗೆ ಇಳಿದು ಆಳದ ಪ್ರದೇಶಕ್ಕೆ ಹೋಗಿದ್ದಾರೆ. ಮೂವರಿಗೂ ಈಜು ಬರದೇ ಇದ್ದಿದ್ದರಿಂದ ಮುಳುಗಿ ಮೃತಪಟ್ಟಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೂವರು ಮೈಸೂರು ಮೂಲದವರು. ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಆಗಿದ್ದಾರೆ. ಘಟನೆ ನಡೆದಾಗ ರೆಸಾರ್ಟ್‌ನಲ್ಲಿ ಲೈಫ್ ಗಾರ್ಡ್ ಯಾರೂ ಇರಲಿಲ್ಲ. ಸುರಕ್ಷತೆ ನಾಮಫಲಕ ಇರಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ' ಎಂದಿದ್ದಾರೆ.
ಅಂದಹಾಗೆ ಈಜುಕೊಳದಲ್ಲಿ ಈಜುವುದಕ್ಕಿಂತ ಆಟ ಆಡಲು ತುಂಬಾ ಜನ ನೀರಿಗಿಳಿಯುತ್ತಾರೆ. ನೀರಿಗಿಳಿಯುವ ಪ್ರತಿಯೊಬ್ಬರಿಗೂ ಈಜಲು ಬರುವುದಿಲ್ಲ. ಹೀಗಾಗಿ ಈಜುಕೊಳದ ಬಳಿ ಮುಂಜಾಗ್ರತೆ ಸೂಚನೆಗಳನ್ನು ನೀಡಬೇಕು. ಸ್ಥಳದಲ್ಲಿ ಯಾರಾದರೂ ಒಬ್ಬರು ಇರಬೇಕು. ರೆಸಾರ್ಟ್‌ನ ಇಂತಹ ಸಣ್ಣ ನಿರ್ಲಕ್ಷ್ಯದಿಂದ ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ.
ಇಂತಹ ಸಣ್ಣ ವಿಚಾರಗಳು ರೆಸಾರ್ಟ್‌ಗಳಲ್ಲಿ ನಿರ್ಲಕ್ಷ್ಯಿಸಲಾಗುತ್ತದೆ. ಈಜುಕೊಳದಲ್ಲಿ ಇಳಿಯುವ ಪ್ರತಿಯೊಬ್ಬರೂ ಆಳ ತಿಳಿದಿರುವುದಿಲ್ಲ. ಹೀಗಾಗಿ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಅದೇನೇ ಆಗಲಿ ವಾರಾಂತ್ಯದ ಪ್ರವಾಸಕ್ಕೆಂದು ತೆರಳಿದ್ದ ಮೂವರು ಯುವತಿಯರ ಪ್ರಾಣಪಕ್ಷಿ ಹಾರಿ ಹೋಗಿದೆ. ಮುಂದಾದರೂ ಈಜುಕೊಳವಿರುವ ರೆಸಾರ್ಟ್‌ಗಳು ಇಂತಹ ಸಣ್ಣ ಸಣ್ಣ ಮುಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನ ಕಲಿಯಬೇಕಿದೆ.












Click it and Unblock the Notifications