ಕಲ್ಲು ಕ್ವಾರಿಯಲ್ಲಿ ಮುಳುಗಿ ಮೂರು ಮಕ್ಕಳ ಸಾವು
ಮಂಗಳೂರು, ಜು. 21 : ಕಲ್ಲಿನ ಕೋರೆಯ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಬಾಲಕಿಯರು ಸಾವನ್ನಪ್ಪಿದ ಧಾರುಣ ಘಟನೆ ಭಾನುವಾರ ಮಂಗಳೂರಿನಲ್ಲಿ ನಡೆದಿದೆ. ಸೊಪ್ಪು ತರಲು ತಾಯಿಯೊಂದಿಗೆ ತೆರಳಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿವೆ.
ಮಂಗಳೂರು ತಾಲೂಕು ಮಿಜಾರು ಸಮೀಪದ ಬಡಗ ಎಡಪದವು ಗ್ರಾಮದ ದಡ್ಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಲ್ಲು ಕೋರೆಯಲ್ಲಿ ಮುಳುಗಿ ಮೃತಪಟ್ಟ ಮಕ್ಕಳನ್ನು ಮಿಜಾರು ದಡ್ಡಿ ಕಲ್ಪನೆಯ ವಾಸು ಶೆಟ್ಟಿಗಾರ ಮತ್ತು ಸೀತಾ ದಂಪತಿಯ ಮಕ್ಕಳಾದ ಮೇಘಶ್ರೀ (12), ವಾಣಿಶ್ರೀ (11) ಮತ್ತು ಯಕ್ಷಿತಾ (6) ಎಂದು ಗುರುತಿಸಲಾಗಿದೆ.

ಘಟನೆ ವಿವರ : ಭಾನುವಾರ ಕಾಡಿಗೆ ಸೊಪ್ಪು ತರಲು ಹೋದ ಸೀತಾ ಅವರರೊಂದಿಗೆ ಮಕ್ಕಳು ತೆರೆಳಿದ್ದರು. ತಾಯಿ ಕೆಲವೇ ಸಮಯದಲ್ಲಿ ಮನೆಗೆ ಹಿಂದಿರುಗಿದರೂ ಮಕ್ಕಳು ಬಂದಿರಲಿಲ್ಲ. ಸುಮಾರು ಅರ್ಧ ಗಂಟೆಯ ಬಳಿಕ ಮಳೆ ಆರಂಭವಾದಾಗ ಸೀತಾ ಮಕ್ಕಳನ್ನು ಹುಡುಕಲು ಆರಂಭಿಸಿದ್ದಾರೆ.
ಮನೆಯಿಂದ ಸ್ವಲ್ಪ ದೂರದಲ್ಲಿರುವ ಕಲ್ಲಿನ ಕೋರೆಯ ಬಳಿ ಹೋದಾಗ ಅಲ್ಲಿ ಮಕ್ಕಳ ಚಪ್ಪಲಿ ಕಂಡು ಬಂದಿದೆ. ತಕ್ಷಣ ಸ್ಥಳೀಯರನ್ನು ಕರೆದು, ಹುಡುಕಾಟ ನಡೆಸಿದಾಗ ಮೂರೂ ಮಕ್ಕಳು ನೀರಿನಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಲಾಯಿತು. ಅಷ್ಟರಲ್ಲಿ ಮಕ್ಕಳು ಮೃತಪಟ್ಟಿದ್ದರು.
50 ವರ್ಷ ಹಳೆಯ ಕೋರೆ : ವಾಸು ಶೆಟ್ಟಿಗಾರ್ ಮನೆಯ ಹಿಂಭಾಗದಲ್ಲಿರುವ ಈ ಕಲ್ಲು ಕೋರೆ ಸುಮಾರು 50 ವರ್ಷದಷ್ಟು ಹಳೆಯದು. ಈ ಕೊರೆಯ ತುಂಬಾ ಕೆಸರು ತುಂಬಿಕೊಂಡಿದ್ದು, ನಿಜವಾಗಿಯೂ ಎಷ್ಟು ಆಳವಿದೆ ಎಂದು ತಿಳಿದಿಲ್ಲ. ಕೋರೆಯ ಸುತ್ತ ಮರ, ಗಿಡ, ಪೊದೆ ಬೆಳೆದಿದೆ. ಈ ಕೋರೆ ಇರುವ ಜಾಗದ ವ್ಯಕ್ತಿಗಳು ಬಹಳ ಹಿಂದೆಯೇ ಸಾವನ್ನಪ್ಪಿದ್ದು, ಸ್ಥಳ ಹಾಗೆ ಉಳಿದಿದೆ.
ಕಾಡಿಗೆ ಹೋದ ಮಕ್ಕಳು ಮಳೆ ಬಂದಿದ್ದರಿಂದ ಓಡಿ ಬಂದಿದ್ದಾರೆ. ಆ ಸಮಯದಲ್ಲಿ ಕೊರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತ ಬಾಲಕಿಯರ ಕುಟುಂಬಕ್ಕೆ 4.5 ಲಕ್ಷ ರೂ. ಪರಿಹಾರವನ್ನು ಶಾಸಕ ಬಿ.ಎ. ಶಾಸಕ ಮೊಯಿದ್ದೀನ್ ಬಾವ ಘೋಷಿಸಿದ್ದು, ಸ್ಥಳದಲ್ಲಿಯೇ ಚೆಕ್ ವಿತರಣೆ ಮಾಡಿದ್ದಾರೆ.












Click it and Unblock the Notifications