ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವ ಸಂಪನ್ನ
ಮಂಗಳೂರು, ಡಿಸೆಂಬರ್ 13: ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಉತ್ಸವ ಸಂಪನ್ನಗೊಂಡಿದೆ. ಕೋಟ್ಯಾಂತರ ಭಕ್ತರ ಆರಾಧ್ಯದೈವ ಸುಬ್ರಹ್ಮಣ್ಯ ಕೊನೆಯ ಬಾರಿಗೆ 400 ವರ್ಷಗಳ ಹಿಂದಿನ ಬ್ರಹ್ಮರಥದಲ್ಲಿ ರಥಾರೂಡನಾಗಿ ಭಕ್ತರಿಗೆ ದರ್ಶನ ನೀಡಿದ್ದು, ಲಕ್ಷಾಂತರ ಭಕ್ತರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಮುಂಜಾನೆ 6.41 ರ ವೃಶ್ಚಿಕ ಲಗ್ನದಲ್ಲಿ ಸುಬ್ರಹ್ಮಣ್ಯ ದೇವರು ರಥಾರೂಡನಾಗಿದ್ದು, ವೈಭವ ಪೂರ್ಣವಾಗಿ ತೇರು ಉತ್ಸವ ನಡೆದಿದೆ. ದೇವಸ್ಥಾನದ ಎದುರಿನ ರಥಬೀದಿಯಲ್ಲಿ ಮೊದಲು ಉಮಾಮಹೇಶ್ವರ ದೇವರ ಸಣ್ಣ ರಥ ಮುಂದೆ ಸಾಗಿದರೆ, ಅದರ ಹಿಂದೆ ಸುಬ್ರಹ್ಮಣ್ಯ ಬ್ರಹ್ಮ ರಥದಲ್ಲಿ ಸಾಗಿ ಅಸಂಖ್ಯಾತ ಭಕ್ತರಿಗೆ ದರ್ಶನ ನೀಡಿದ್ದಾನೆ.
400 ವರ್ಷಗಳ ಹಿಂದಿನ ಬ್ರಹ್ಮ ರಥದಲ್ಲಿ ಸುಬ್ರಹ್ಮಣ್ಯ ಕೊನೆಯ ಬಾರಿಗೆ ರಥಾರೂಡನಾಗಿದ್ದು, ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಉದ್ಯಮಿ ಮುತ್ತಪ್ಪ ರೈ ಎರಡು ಕೋಟಿ ವೆಚ್ಚದಲ್ಲಿ ನೂತನ ಬ್ರಹ್ಮರಥ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ.

ನಾಡಿನ ಶ್ರೀಮಂತ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷಾಂತರ ಮಂದಿ ಭಕ್ತರು ಸುಬ್ರಹ್ಮಣ್ಯನ ಐತಿಹಾಸಿಕ ವಾರ್ಷಿಕ ಉತ್ಸವಕ್ಕೆ ಸಾಕ್ಷಿಯಾಗಿದ್ದು, ವೈಭವಪೂರ್ಣವಾಗಿ ಸುಬ್ರಹ್ಮಣ್ಯನ ಉತ್ಸವ ತೆರೆ ಬಿದ್ದಿದೆ.
ಈ ಮೊದಲು ತಡರಾತ್ರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪಂಚಮಿ ರಥೋತ್ಸವ ಸಂಭ್ರಮದಿಂದ ನಡೆಯಿತು. ದೇವಳದಲ್ಲಿ ಸುಬ್ರಹ್ಮಣ್ಯ ದೇವರು ದೇವಿ ಹಾಗೂ ಗಣಪತಿಗೆ ಪೂಜೆ ಸಲ್ಲಿಕೆಯಾದ ಬಳಿಕ ಶ್ರೀ ಕ್ಷೇತ್ರದ ಪ್ರಾಂಗಣದಲ್ಲಿ ದೇವರ ಪೂಜಾ ಮೂರ್ತಿಯನ್ನು ಹೊತ್ತು ಪಲ್ಲಕ್ಕಿಯಲ್ಲಿ ಬಲಿಸೇವೆ ನಡೆಸಲಾಯ್ತು.

ಬಳಿಕ ಪಂಚಮಿ ರಥದಲ್ಲಿ ಸುಬ್ರಹ್ಮಣ್ಯ ದೇವರನ್ನು ಕುಳ್ಳಿರಿಸಿ ಕಾಶೀಕಟ್ಟೆ ಮಹಾಗಣಪತಿ ದೇವಸ್ಥಾನದವರೆಗೆ ರಥೋತ್ಸವ ನಡೆಸಲಾಯ್ತು. ವಿಶೇಷವೆಂದರೆ, ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಥವನ್ನು ಎಳೆಯಲು ಬಳಸುವುದು ಬಿದಿರಿನ ಕೋಲು.
ರಥಕ್ಕೆ ಅಳವಡಿಸಲಾಗಿದ್ದ ಬಿದಿರಿನ ಕೋಲಿನ ಮೂಲಕವೇ ಲಕ್ಷಾಂತರ ಭಕ್ತಾಧಿಗಳು ದೇವಳದ ರಾಜಮಾರ್ಗದಲ್ಲಿ ರಥವನ್ನು ಎಳೆಯುವ ಮೂಲಕ ಪುನೀತರಾದರು. ತಡರಾತ್ರಿ 1 ಗಂಟೆಗೆ ಶ್ರೀ ದೇವರ ರಥೋತ್ಸವ ಪ್ರಾರಂಭಗೊಂಡಿತ್ತು.












Click it and Unblock the Notifications