ಕದ್ದ ಚಿನ್ನವನ್ನು ಮನೆಯ ಮುಂದೆ ಎಸೆದು ಹೋದ ಕಳ್ಳರು!
ಮಂಗಳೂರು, ಸೆಪ್ಟೆಂಬರ್ 19 : ಮನೆಯಿಂದ ಕಳುವಾದ ವಸ್ತುಗಳು ವರ್ಷಗಳು ಕಳೆದರೂ ಸಿಗುವುದಿಲ್ಲ. ಆದರೆ, ಕದ್ದ ಚಿನ್ನವನ್ನು ಮೂರೇ ದಿನದಲ್ಲಿ ಮನೆಯ ಅಂಗಳದಲ್ಲಿ ಎಸೆದು ಹೋದ ಅಚ್ಚರಿಯ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ನಗರದ ಹೊರವಲಯದ ಬಿಕರ್ನಕಟ್ಟೆ ಆಡುಮರೋಳಿಯ ಮಾರಿಕಾಂಬಾ ದೇವಾಲಯದ ಬಳಿಯ ಮನೆಯೊಂದರಲ್ಲಿ ಕಳ್ಳತನವಾಗಿತ್ತು. ಕಳ್ಳತನವಾದ ಮೂರು ದಿನಗಳಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತರು ಮನೆಯ ಅಂಗಳಕ್ಕೆ ಕದ್ದ ಚಿನ್ನವನ್ನು ಎಸೆದು ಪರಾರಿಯಾಗಿದ್ದಾರೆ.
ಶೇಖರ್ ಕುಂದರ್ ರವರ ಮನೆಯಲ್ಲಿ ಶನಿವಾರ ಸಂಜೆ ಕಳ್ಳರು ತಮ್ಮ ಕೈಚಳಕ ತೋರಿದ್ದರು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನಾಲ್ವರು ದುಷ್ಕರ್ಮಿಗಳು ಹಿಂಬಾಗಿಲನ್ನು ಒಡೆದು ಮನೆಗೆ ನುಗ್ಗಿದ್ದರು. ಲಾಕರ್ ನಲ್ಲಿದ್ದ 99 ಪವನ್ ಚಿನ್ನ ಮತ್ತು 13 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದರು.
ಶೇಖರ್ ಕಳ್ಳತನದ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಮೂರೇ ದಿನದಲ್ಲಿ ಮನೆಯಿಂದ ಕದ್ದ ಚಿನ್ನ ಮನೆಯ ಅಂಗಳಕ್ಕೆ ಬಂದು ಬಿದ್ದಿದೆ. ಇದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.

ಚಿನ್ನವನ್ನು ಎಸೆದು ಹೋದರು
ಕಳ್ಳತನ ನಡೆದ ಎರಡು ದಿನದ ಬಳಿಕ ಸಂಜೆ ವೇಳೆಗೆ ಬೈಕ್ ನಲ್ಲಿ ಬಂದ ಅಪರಿಚಿತರು ಕಾಗದದಲ್ಲಿ ಸುತ್ತಿ ಚಿನ್ನವನ್ನು ಮನೆಯ ಅಂಗಳದಲ್ಲಿ ಎಸೆದು ಹೋಗಿದ್ದಾರೆ. ಅಲ್ಲದೆ ಪತ್ರವನ್ನೂ ಬರೆದಿದ್ದಾರೆ.

ಸಿಕ್ಕ ಪತ್ರದಲ್ಲೇನಿದೆ?
'ನಾನು ಮೊನ್ನೆ ಸಂಜೆ ನಿಮ್ಮ ಮನೆಯ ಎದುರಿನಿಂದ ಹೋಗುತ್ತಿದ್ದೆ. ಆ ಸಮಯ ನಿಮ್ಮ ಮನೆಯಿಂದ ನಾಲ್ಕು ಮಂದಿ ಓಡಿ ಹೊರಬಂದಿದ್ದಾರೆ. ಅನುಮಾನದಿಂದ ಅವರನ್ನು ಅಡ್ಡಗಟ್ಟಿ ವಿಚಾರಿಸಿದೆ ಅವರು ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ ಕಳ್ಳರು ತಮ್ಮಲ್ಲಿದ್ದ ಚೀಲವನ್ನು ಬಿಟ್ಟು ಪರಾರಿಯಾಗಿದ್ದಾರೆ' ಎಂದು ಪತ್ರದಲ್ಲಿ ಬರೆಯಲಾಗಿದೆ.

ಪೊಲೀಸ್ ಠಾಣೆಗೆ ಹೋಗಲು ಭಯ
'ನಮಗೆ ಈ ವಸ್ತುಗಳನ್ನು ನಿಮಗೆ ಹಿಂದಿರುಗಿಸುವ ಧೈರ್ಯ ಬರಲಿಲ್ಲ. ಪೊಲೀಸ್ ಠಾಣೆಗೆ ತೆರಳಿ ವಸ್ತುಗಳನ್ನು ನೀಡಲು ಭಯ ಕಾಡಿದ ಹಿನ್ನೆಲೆಯಲ್ಲಿ ಅದನ್ನು ಈಗ ಈ ರೀತಿ ಮರಳಿಸುತ್ತಿದ್ದೆನೆ. ಕ್ಷಮಿಸಿ .ಇಷ್ಟೊಂದು ಚಿನ್ನವನ್ನು ಬ್ಯಾಂಕಿನಲ್ಲಿ ಇಡಬೇಕಿತ್ತು, ಮನೆಯಲ್ಲಿ ಇಟ್ಟಿದ್ದು ಏಕೆ?'. ಇನ್ನಾದರೂ ಜಾಗೃತೆ ವಹಿಸಿ ಎಂದು ಪತ್ರದಲ್ಲಿ ಬರೆದಿದ್ದಾರೆ.

ಯಾರು ಎಸೆದು ಹೋದರು ಎಂಬುದು ನಿಗೂಢ
ಕಳುವಾದ ಚಿನ್ನ ಮತ್ತೆ ಮರಳಿ ಸಿಕ್ಕಿದ್ದಕ್ಕೆ ಮನೆ ಮಂದಿ ಸಂತಸಗೊಂಡಿದ್ದಾರೆ. ಆದರೆ, ಬೈಕ್ ನಲ್ಲಿ ಚಿನ್ನ ಎಸೆದು ಹೋದವರು ಯಾರು? ಎಂಬುವುದು ಇನ್ನೂ ಪತ್ತೆಯಾಗಿಲ್ಲ. ಈ ಅಪರೂಪದ ಘಟನೆ ಭಾರೀ ಕುತೂಹಲ ಮೂಡಿಸಿದೆ. ಚಿನ್ನ ಕಳೆದು ಹೋದ ಬಳಿಕ ಮನೆ ಮಂದಿ ದೈವಕ್ಕೆ ಹರಕೆ ನೀಡಿದ್ದು, ಹರಕೆ ವಿಷಯ ಗೊತ್ತಾದ ಕಳ್ಳರು ಭಯದಿಂದ ಚಿನ್ನ ಬಿಸಾಡಿರಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications