ಶಾಸಕ ಪೂಂಜಾ ಮೇಲೆ ಕೊಲೆಯತ್ನ ಆಗಿಲ್ಲ, ಇದು ರೋಡ್ ರೇಜ್ ಅಷ್ಟೇ: ಎಸ್ಪಿ ಸ್ಪಷ್ಟನೆ
ಮಂಗಳೂರು, ಅಕ್ಟೋಬರ್ 15: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರನ್ನು ಅಡ್ಡಗಟ್ಟಿದ ಆರೋಪಿ ತಲವಾರು ಝಳಪಿಸಿದ ವಿಚಾರದ ಸತ್ಯಾಂಶ ಬಯಲಾಗಿದೆ. ಇದು ಕೊಲೆಯತ್ನ ಪ್ರಕರಣವಲ್ಲ, ರೋಡ್ ರೇಜ್ ನಿಂದ ನಡೆದ ಘಟನೆ ಅಂತಾ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಸ್ಪಷ್ಟಪಡಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಇದು ಕೊಲೆಯತ್ನ ಪ್ರಕರಣವಲ್ಲ, ಓವರ್ ಟೇಕ್ ಮಾಡುವ ಭರದಲ್ಲಿ ಮಾಡಿದಾಗ ನಡೆದ ಘಟನೆಯಾಗಿದೆ. ಸ್ಕಾರ್ಪಿಯೋ ಕಾರಿನಲ್ಲಿದ್ದ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಬಳಿ ಯಾವುದೇ ಆಯುಧಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಕೇರಳ ರಿಜಿಸ್ಟ್ರೇಷನ್ ನ ಸ್ಕಾರ್ಪಿಯೋ ವಾಹನ ಇದಾಗಿದ್ದು, ಮಂಗಳೂರಿನ ಪಳ್ನೀರ್ ನಿವಾಸಿ ರಿಯಾಜ್(38)ನನ್ನು ವಶಕ್ಕೆ ಪಡೆಯಲಾಗಿದೆ. ಮತ್ತು ಸ್ಕಾರ್ಪಿಯೋ ಕಾರನ್ನೂ ವಶಕ್ಕೆ ಪಡೆಯಲಾಗಿದೆ. ಆರೋಪಿ ರಿಯಾಜ್ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಕರಣದ ಬಗ್ಗೆ ತನಿಖೆ ಮುಂದುವರಿಸುತ್ತೇವೆ ಎಂದು ಋಷಿಕೇಶ್ ಸೋನಾವಣೆ ಹೇಳಿದ್ದಾರೆ.
ಆರೋಪಿ ತನ್ನ ಕಾರಿನ ಮೇಲೆ ತಲವಾರು ಝಳಪಿಸಿದ್ದ ಎಂದು ಶಾಸಕ ಹರೀಶ್ ಪೂಂಜಾ ದೂರಿದ್ದರು. ರಾತ್ರಿ ಬೆಂಗಳೂರಿನಿಂದ ಬಂದು ಬೆಳ್ತಂಗಡಿ ಹೋಗುತ್ತಿರುವಾಗ ಘಟನೆ ನಡೆದಿದೆ. ರಾತ್ರಿ ಸುಮಾರು 11 ಗಂಟೆ ವೇಳೆಗೆ ದಾಳಿ ಸಂದರ್ಭದಲ್ಲಿ ನಾನು ನನ್ನ ಸ್ನೇಹಿತನ ಕಾರಿನಲ್ಲಿದ್ದೆ. ದಾಳಿ ನಡೆಸಲು ಬಂದಿದ್ದ ಕಾರು ಚಾಲಕ ಮೊದಲು ನನ್ನ ಇನ್ನೋವಾ ಕಾರಿಗೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆ ಕಾರಿನಲ್ಲಿ ನಾನು ಇಲ್ಲದ ಕಾರಣ ಮತ್ತೆ ನಾನಿದ್ದ ಹುಂಡೈ I20 ಕಾರಿನ ಮೇಲೆ ಹಲ್ಲೆ ನಡೆಸಿದ್ದಾನೆ.

ಕಾರಿನ ಗಾಜಿನ ಮೇಲೆ ಹ್ಯಾಂಡಲ್ ಇರುವ ತಲುವಾರು ಮೂಲಕ ಹೊಡೆದಿದ್ದಾನೆ. ಈ ವಿಚಾರವನ್ನು ತಕ್ಷಣವೇ ಬಂಟ್ವಾಳ ಡಿವೈಎಸ್ಪಿ ಗಮನಕ್ಕೆ ತಂದಿದ್ದೇನೆ. ಗೃಹ ಸಚಿವರೂ ನನ್ನ ಬಳಿ ಈ ವಿಚಾರವಾಗಿ ಚರ್ಚಿಸಿದ್ದಾರೆ. ಭದ್ರತೆಗೆ ವ್ಯವಸ್ಥೆ ಮಾಡುವ ಭರವಸೆಯನ್ನೂ ನೀಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಪ್ರತಿಕ್ರಿಯೆ ನೀಡಿದ್ದರು.
ನಾನು ಹಿಂದುತ್ವದ ಪರವಾಗಿ ಕೆಲಸ ಮಾಡುವ ಶಾಸಕ. ಇದಕ್ಕಾಗಿ ಜಿಹಾದಿ ಶಕ್ತಿಗಳು ನನ್ನ ಮೇಲೆ ಹಗೆ ಸಾಧಿಸುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಹಿಂದುತ್ವದ ವಿಚಾರದಲ್ಲಿ ರಾಜಿಯಿಲ್ಲ. ಕೇರಳ ನೊಂದಣಿಯ ಕಾರು ಚಾಲಕನಿಂದ ಕೃತ್ಯವಾಗಿದೆ. ಈಗಾಗಲೇ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಕಾರಿನ ನಂಬರ್ ನೀಡಲಾಗಿದೆ, ಬಿಳಿ ಬಣ್ಣದ ಸ್ಕೋರ್ಪಿಯೋ ಕಾರು ಚಾಲಕನಿಂದ ಬೆದರಿಕೆ ಬಂದಿದೆ. ಆತನ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದರು.
ಹರೀಶ್ ಪೂಂಜಾ ಕಾರು ಚಾಲಕ ನವೀನ್ ನೀಡಿದ್ದ ದೂರಿನ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಮಾಡಿದ್ದರು. ಇನ್ನೊಂದೆಡೆ ಶಾಸಕ ಹರೀಶ್ ಪೂಂಜಾ ಎಸ್ಕಾರ್ಟ್ ಪಡೆಯಲು ಈ ನಾಟಕವಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟೀಕೆ ಮಾಡಿದ್ದಾರೆ.












Click it and Unblock the Notifications