ಮಂಗಳೂರು : 8 ಲಕ್ಷ ರೂ.ಗಳ ಮೀನು ಕಳವು!
ಮಂಗಳೂರು, ಆ.26 : ಹಣ, ಚಿನ್ನ, ವಾಹನ ಕಳುವಾಗುವುದು ಸಾಮಾನ್ಯ. ಆದರೆ, ಮಂಗಳೂರಿನ ಸಿಎಂಎಫ್‌ಆರ್‌ಐ ಕೇಂದ್ರ ಅಳವಡಿಸಿದ್ದ ಬಲೆಯಿಂದ ಸುಮಾರು 8 ಲಕ್ಷ ರೂ. ಮೌಲ್ಯದ ಮೀನುಗಳನ್ನು ಕಳುವು ಮಾಡಲಾಗಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ಕೇಂದ್ರೀಯ ಸಾಗರ ಮತ್ಸ್ಯಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ) ಶಾಂಭವಿ ಹೊಳೆಯಲ್ಲಿ ಅಳವಡಿಸಿದ ಮೀನು ಬಲೆಯನ್ನು ಕತ್ತರಿಸಿರುವ ದುಷ್ಕರ್ಮಿಗಳು ಸುಮಾರು 8 ಲಕ್ಷ ಮೌಲ್ಯದ ಮೀನುಗಳನ್ನು ಕಳವು ಮಾಡಿದ್ದಾರೆ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿ ಸತೀಶ್ ಹೇಳಿದ್ದಾರೆ. [ಪಿಲಿಕುಳದಲ್ಲಿ ಮೀನು ಮೇಳ : ಚಿತ್ರಗಳು]
ಕೇಂದ್ರ ಸರ್ಕಾರದ ಯೋಜನೆ ಅನ್ವಯ ಆದಿವಾಸಿಗಳಿಗಾಗಿ ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರವು ಮೂಲ್ಕಿ ಕೊಳಚಿ ಕಂಬ್ಳಬಳಿ ಶಾಂಭವಿ ಹೊಳೆಯಲ್ಲಿ ಕೇಜ್ ಮೂಲಕ ಸಾಕುತ್ತಿದ್ದ ಸುಮಾರು 8 ಲಕ್ಷ ಮೌಲ್ಯದ ಮೀನುಗಳನ್ನು ಕಳವು ಮಾಡಲಾಗಿದೆ. [ಕರಾವಳಿಯಲ್ಲಿ ತಿನ್ನಲು ಮೀನು ಸಿಕ್ತಿಲ್ಲ]
ಶಾಂಭವಿ ಹೊಳೆಯಲ್ಲಿ ಬೃಹತ್ ಕೇಜ್‍ಗಳನ್ನು ಅಳವಡಿಸಲಾಗಿದ್ದು ವರ್ಷದ ಹಿಂದೆ ಕೆಂಬೇರಿ ಮತ್ತು ಮುಡಾವು ಜಾತಿಯ ಮೀನುಗಳನ್ನು ಸಾಕಲಾಗುತ್ತಿತ್ತು. 2 ವರ್ಷದೊಳಗೆ ಮೀನು ಸುಮಾರು 2ರಿಂದ ಮೂರು ಕೆ.ಜಿ. ಬೆಳೆಯುತ್ತದೆ. ಆ ಸಂದರ್ಭ ಕೆಜಿಯೊಂದಕ್ಕೆ 400ರಿಂದ 600ರೂ. ದೊರಕುತ್ತದೆ.
ಆದರೆ, ಸುಮಾರು 1 ಕೆಜಿ ಯಷ್ಟು ಬೆಳೆದ ಮೀನುಗಳನ್ನು ಎಲ್ಲಾ ಕೇಜ್‍ಗಳ ಮೇಲ್ಭಾಗದ ಬಲೆಯನ್ನು ಹರಿತವಾದ ಚಾಕುವಿನಿಂದ ಕತ್ತರಿಸಿ ಸುಮಾರು 2 ಸಾವಿರ ಕೆಜಿ ಯಷ್ಟು ಮೀನುಗಳನ್ನು ಕಳುವು ಮಾಡಲಾಗಿದೆ.ಈ ಕುರಿತು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಶೋಧನಾ ಕೇಂದ್ರವು ಸಮುದ್ರ ಮೀನುಗಾರಿಕೆ ಸಂಬಂಧಿಸಿದ ವಿವಿಧ ಸಂಶೋಧನೆಗಳನ್ನು ನಿರಂತರವಾಗಿ ನಡೆಸುತ್ತಿದೆ. ಕೇಂದ್ರ ಸರ್ಕಾರ ಆದಿವಾಸಿಗಳಿಗಾಗಿ ಜಾರಿಗೊಳಿಸಿದ ಯೋಜನೆಯಂತೆ ಬ್ರಹ್ಮವಾರ ಮೂಲದ 12 ಆದಿವಾಸಿ ಕುಟುಂಬಗಳಿಗಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !