ಮಸೀದಿಗಳಿಗೆ ತಸ್ತಿಕ್ ಭತ್ಯೆ; ವಿಎಚ್‌ಪಿ, ಭಜರಂಗದಳ ತೀವ್ರ ವಿರೋಧ
ಮಂಗಳೂರು, ಜೂನ್ 09; ಧಾರ್ಮಿಕ ದತ್ತಿ ಇಲಾಖೆಯ ಹೊಸ ಆದೇಶ ಕರಾವಳಿಯಲ್ಲಿ ವಿವಾದ ಹುಟ್ಟು ಹಾಕಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ಯೆ ನೀಡುವುದಕ್ಕೆ ಮಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ ವಿರೋಧ ವ್ಯಕ್ತಪಡಿಸಿದೆ.
ಕೊರೊನಾ ಲಾಕ್‌ಡೌನ್‌ನಿಂದಾಗಿ ದೇವಾಲಯಗಳ ಅರ್ಚಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಸ್ತಿಕ್ ಭತ್ಯೆ ನೀಡಲು ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಮಾಡಲಾಗಿದೆ. ಈ ಸಂಬಂಧ 32 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆಯೂ ಸರ್ಕಾರ ಆದೇಶಿಸಿದೆ.
ಆದರೆ ಈ ಆದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 41 ಮಸೀದಿ, ಮದರಸಾದ ಮೌಲ್ವಿಗಳಿಗೂ ತಸ್ತಿಕ್ ಭತ್ಯೆ ನೀಡಲು ಉಲ್ಲೇಖಿಸಲಾಗಿದೆ. ಮಸೀದಿ ಅಥವಾ ಮದರಸಾದ ಮೌಲ್ವಿಗಳಿಗೂ ತಲಾ 48,000 ಸಾವಿರ ರೂಪಾಯಿ ನೀಡಲು ರಾಜ್ಯ ಸರ್ಕಾರ ಸೂಚಿಸಿದೆ.

ಹಿಂದು ಧಾರ್ಮಿಕ ದತ್ತಿ ಇಲಾಖೆ ಮೂಲಕವೇ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ಯೆ ನೀಡಲು ಆದೇಶ ಮಾಡಲಾಗಿದ್ದು,ಇದರಿಂದ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರ ಕೂಡಲೇ ಆದೇಶ ಹಿಂಪಡೆಯಲು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ. ಯಾವುದೇ ಕಾರಣಕ್ಕೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಣದಿಂದ ಮೌಲ್ವಿಗಳಿಗೆ ತಸ್ತಿಕ್ ಭತ್ಯೆ ನೀಡದಂತೆ ಮನವಿ ಮಾಡಲಾಗಿದೆ.
ದೇವಾಲಯದ ಹಣವನ್ನು ಹಿಂದುಗಳಿಗೆ ಮತ್ತು ದೇವಾಲಯದ ಕಾರ್ಯಗಳಿಗೆ ಮಾತ್ರ ಉಪಯೋಗಿಸಬೇಕು. ಮಸೀದಿ, ಮದರಸಾಗಳಿಗೆ ಉಪಯೋಗಿಸುವುದು ಸರಿಯಲ್ಲ ಎಂದು ವಿಶ್ವಹಿಂದೂ ಪರಿಷತ್, ಭಜರಂಗದಳ ಹೇಳಿದೆ.












Click it and Unblock the Notifications