ರಾತ್ರಿ ಕರ್ಫ್ಯೂ ವೇಳೆ ಮಂಗಳೂರಿನಲ್ಲಿ ಸಿಕ್ಕಿಬಿದ್ದ ದರೋಡೆಕೋರರು
ಮಂಗಳೂರು, ಏಪ್ರಿಲ್ 12: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೆಲವು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ವೇಳೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇನ್ನೋವಾ ಕಾರನ್ನು ನಿಲ್ಲಿಸಿದ ಪೊಲೀಸರು, ಕುಖ್ಯಾತ ದರೋಡೆಕೋರ ತಂಡವನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಏಪ್ರಿಲ್ 12ರ ಮುಂಜಾನೆ 2.30ರ ವೇಳೆಗೆ ಮಂಗಳೂರು ನಗರ ಹೊರವಲಯದ ಉಲಾಯಿಬೆಟ್ಟು ಪ್ರದೇಶದ ಪರಾರಿ ಎಂಬಲ್ಲಿ ಎಂಟು ಮಂದಿ ಡಕಾಯಿತರನ್ನು ಒಳಗೊಂಡ ಇನ್ನೋವಾ ಕಾರು ತಿರುಗಾಡುತ್ತಿದ್ದ ವೇಳೆ, ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಪಾತಕಿಗಳನ್ನು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.
ವಿದೇಶದಲ್ಲಿರುವ ಇಬ್ಬರು ರೌಡಿಗಳು ಸೇರಿ ಮಂಗಳೂರಿನಲ್ಲಿ ಒಂದು ಗ್ಯಾಂಗ್ ಅನ್ನು ರಚನೆ ಮಾಡಿದ್ದು, ಈ ಗ್ಯಾಂಗ್ ಹೆದ್ದಾರಿ ದರೋಡೆ, ಮನೆ ದರೋಡೆ, ಕೊಲೆ, ಸುಲಿಗೆಗಳನ್ನು ಮಾಡುತ್ತಿತ್ತು ಎನ್ನಲಾಗಿದೆ. ವಿದೇಶದಲ್ಲಿರುವ ರೌಡಿ ಬಾತೀಶ್ ಮತ್ತು ತೌಸಿರ್ ಎಂಬಾತರು ಈ ಕ್ರಿಮಿನಲ್ ಗ್ಯಾಂಗ್ ಅನ್ನು ಸಾಕುತ್ತಿದ್ದು, ದರೋಡೆ ಟಾರ್ಗೆಟ್ ಗಳನ್ನು ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಈ ಆರೋಪಿಗಳು TB ಗ್ಯಾಂಗ್ ಎಂಬ ವಾಟ್ಸಪ್ ಗುಂಪನ್ನು ರಚಿಸಿದ್ದು, ದರೋಡೆಯ ಪ್ಲಾನ್ ಗಳನ್ನು ಹಂಚುತ್ತಿದ್ದರು. ಹಣಕಾಸಿನ ಸೆಟ್ಲ್ಮೆಂಟ್ ವಿಚಾರವನ್ನೂ ಈ ಗ್ಯಾಂಗ್ ನೋಡುತ್ತಿತ್ತು. ಇದೇ ರೀತಿ ಬೆಂಗಳೂರಿಗೆ ಹಣದ ಸೆಟ್ಲ್ಮೆಂಟ್ ಮಾಡಲು ತೆರಳಿದ್ದ ಈ ಗ್ಯಾಂಗ್ ಮರಳಿ ಮಂಗಳೂರಿಗೆ ಬಂದಾಗ ಪೋಲಿಸರ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರಿನಲ್ಲಿದ್ದ ಝೀಯದ್ ಎಂಬಾತನಿಂದ ಹಣದ ವಸೂಲಿಗೆ ತೆರಳಿದ್ದ ಗ್ಯಾಂಗ್, ಝೀಯದ್ ಸಿಗದೆ ಬರೀ ಕೈಲಿ ಮಂಗಳೂರಿಗೆ ವಾಪಾಸಾಗುತ್ತಿದ್ದರು. ಹೋದ ಕೆಲಸ ಆಗದ ಹಿನ್ನಲೆ ಹೆದ್ದಾರಿ ದರೋಡೆ ಮಾಡುವ ಪ್ಲಾನ್ ಮಾಡಿದ್ದರು.

ವಾಹನಗಳ ಸಂಚಾರ ವಿರಳವಿರುವ ಸಂದರ್ಭದಲ್ಲಿ ಗೂಡ್ಸ್ ಲಾರಿಗಳನ್ನು ದರೋಡೆ ಮಾಡಿ ಹಣ ಲಪಟಾಯಿಸುವ ಉದ್ದೇಶ ಹೊಂದಿದ್ದರು. ಆದರೆ ಪೋಲಿಸರ ಕಾರ್ಯಕ್ಷಮತೆಯಿಂದ ರೌಡಿಗಳ ಪ್ಲಾನ್ ಉಲ್ಟಾ ಆಗಿದೆ. ಬಂಧನವಾದ ಎಂಟೂ ಮಂದಿಯೂ ವಿವಿಧ ಠಾಣೆಗಳಲ್ಲಿ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಬಂಧಿತರನ್ನು ತೌಸಿರ್, ಮೊಹಮ್ಮದ್ ಅರಾಫತ್, ತಸ್ಲಿಂ, ನಾಸೀರ್ ಹುಸೈನ್, ಮೊಹಮ್ಮದ್ ರಫೀಕ್, ಮೊಹಮ್ಮದ್ ಸಫ್ವಾನ್, ಮೊಹಮ್ಮದ್ ಜೈನುದ್ದೀನ್, ಉನೈಝ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 2 ತಲವಾರು, 2 ಚೂರಿ, 1 ಡ್ರಾಗನ್ ಚೂರಿ, 8 ಮೊಬೈಲ್ ಫೋನ್, ಮಂಕಿ ಕ್ಯಾಪ್, ಮೆಣಸಿನ ಹುಡಿಯ ಪ್ಯಾಕೆಟ್, ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications