ಮೇ 9ರಂದು ರಾಜ್ಯದ ಒಂದು ಸಾವಿರ ದೇವಸ್ಥಾನದಲ್ಲಿ ಸುಪ್ರಭಾತ: ಪ್ರಮೋದ್ ಮುತಾಲಿಕ್
ಮಂಗಳೂರು, ಮೇ 1: "ಶ್ರೀರಾಮಸೇನೆ ರಾಜ್ಯದಲ್ಲೂ ಮಸೀದಿ ಮೈಕ್ ಇಳಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿ ಗಡುವು ನೀಡಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮೇ 9ರಂದು 1ಸಾವಿರ ದೇವಸ್ಥಾನ, ಮಠಗಳಲ್ಲಿ ಬೆಳಗ್ಗಿನ ಜಾವ 5 ಗಂಟೆಗೆ ಓಂಕಾರ, ಸುಪ್ರಭಾತ ಹಾಕುವ ನಿರ್ಣಯ ಮಾಡಿದ್ದೇವೆ. ಸರಕಾರಕ್ಕೆ, ಮುಸ್ಲಿಂ ಸಮಾಜಕ್ಕೆ ಚಾಲೆಂಜ್ ಆಗಿ ಇದನ್ನು ಮಾಡುತ್ತಿದ್ದೇವೆ. ಸರಕಾರವೇನಾದರೂ ಇದನ್ನು ತಡೆಯಲು ಬಂದರೆ ಸಂಘರ್ಷ ಖಂಡಿತ," ಎಂದು ಶ್ರೀರಾಮಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.
"ಹಿಂದೂ ಸಮಾಜ ಖಂಡಿತಾ ಕೆರಳುತ್ತದೆ. ಕೆರಳಿಸುವ ಹಾಗೆ ನೀವು ಮಾಡದಿರಿ. ಮುಸ್ಲಿಂ ಸಮಾಜವೂ ಇದು ತಾಲಿಬಾನ್, ಅಫ್ಘಾನಿಸ್ತಾನ ಅಲ್ಲ ಇದು ಭಾರತದ ಸಂವಿಧಾನದ ಅಡಿಯಲ್ಲಿ ನಡೆಯುತ್ತಿದೆ ಎಂದು ನೆನಪಿನಲ್ಲಿಡಲಿ. ಆದ್ದರಿಂದ ಮೇ 9ರಂದು ಮಸೀದಿಯ ಅಜಾನ್ ಕೇಳದಷ್ಟು ಜೋರಾಗಿ ದೇವಸ್ಥಾನದಲ್ಲಿ ಓಂಕಾರ, ಸುಪ್ರಭಾತ ಹಾಕೋದು ಖಂಡಿತಾ," ಎಂದು ಸವಾಲೆಸೆದರು.
"ಅಜಾನ್ ಮೈಕ್ ಅನ್ನು ಸ್ಥಗಿತಗೊಳಿಸಲು ಕಳೆದ 15 ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಆದರೆ ಇದು ನಿಂತಿಲ್ಲ. ನಾನು ಅಜಾನ್ ವಿರುದ್ಧ ಸಮರ ಸಾರುತ್ತಿಲ್ಲ ಮೈಕ್ ನ ಶಬ್ದ ಹಾಗೂ ಸುಪ್ರೀಂ ಕೋರ್ಟ್ ಆಜ್ಞೆಯ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇಂದಿನವರೆಗೂ ಸುಪ್ರೀಂ ಕೋರ್ಟ್ ಆಜ್ಞೆಯನ್ನು ಮಸೀದಿಯ ಮೇಲಿನ ಮೈಕ್ ವಿಚಾರದಲ್ಲಿ ಪಾಲನೆ ಆಗುತ್ತಿಲ್ಲ. ಇಲ್ಲಿ ಸುಪ್ರೀಂ ಕೋರ್ಟ್ ಆಜ್ಞೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ," ಎಂದು ಹೇಳಿದರು.

"ಆದ್ದರಿಂದ ಬೆಳಗ್ಗಿನ 5ಗಂಟೆಯ ಅಜಾನ್ ಮೈಕನ್ನು ನಿಲ್ಲಿಸಬೇಕು. ಮೈಕ್ ಶಬ್ದ ಎಷ್ಟು ಇರಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ನಿಶ್ಶಬ್ಧ ವಲಯದ ಪ್ರದೇಶದಲ್ಲೂ ಅಜಾನ್ ಮೈಕ್ ಹಾಕಬಾರದೆಂದು ಹೇಳಲಾಗಿದೆ. ಇಲ್ಲೆಲ್ಲಾ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯೂ ಆಗಿದೆ. ಮುಸ್ಲಿಂ ಸಮಾಜ ಒಂದು ಕಡೆಯಲ್ಲಿ ಹಠದಿಂದ ಸೊಕ್ಕಿನಿಂದ ವರ್ತಿಸುತ್ತಿದೆ. ಇನ್ನೊಂದೆಡೆ ಆಡಳಿತದಲ್ಲಿರುವ ಸರಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರುತ್ತಿಲ್ಲ. ಆದ್ದರಿಂದ ಆಜಾನ್ ಮೈಕ್ ಮಾತ್ರವಲ್ಲ ಸರಕಾರದ ವಿರುದ್ಧವೂ ನಮ್ಮ ಹೋರಾಟವಿದೆ," ಎಂದರು.
ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿ ಅಷ್ಟೇ: ಮುತಾಲಿಕ್
"ಯುಪಿಯ ಯೋಗಿ ಸರಕಾರದ ಮಾದರಿಯಲ್ಲಿ ಮಸೀದಿಯ ಮೈಕ್ ಅನ್ನು ಕೆಳಗಿಳಿಸುವ ಧೈರ್ಯ ತೋರಿಸಲಿ. ಇದು ಯಾರ ವಿರುದ್ಧವಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿ ಅಷ್ಟೇ. ಬರೀ ನೋಟಿಸ್ ನೀಡಿದ್ದೇವೆ ಎಂಬ ನಾಟಕ ಮಾಡೋದು ಬೇಡ. ಇನ್ನೊಂದೆಡೆ ಸುಪ್ರೀಂ ಕೋರ್ಟ್ ಆಜ್ಞೆ ಉಲ್ಲಂಘಿಸಿ ಕುರಾನ್ ಶರಿಯಾ ಕಾನೂನು ಪಾಲಿಸುತ್ತೇವೆ ಎಂಬ ಮುಸ್ಲಿಂ ಸಮಾಜದ ಮಾನಸಿಕತೆ ಇದು ಅತ್ಯಂತ ಅಪಾಯಕಾರಿಯಾಗಿದೆ," ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
ಕೇರಳ ಮೂಲದ ಚಿನ್ನದ ಮಾಫಿಯಾ ಹಿಂದೂ ಸಮಾಜ, ಹಿಂದೂ ದೇಶಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ ಈ ಜಾಲಕ್ಕೆ ಅಕ್ಷಯ ತೃತೀಯ ದಿನ ಪಾಠ ಕಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯು ರಾಜ್ಯಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ಅಕ್ಷಯ ತೃತೀಯದಂದು ಹಿಂದೂ ಚಿನ್ನದಂಗಡಿಯಲ್ಲಿಯೇ ಮಹಿಳೆಯರು ಚಿನ್ನ ಖರೀದಿಸಬೇಕೆಂದು ಮಹಿಳೆಯರಿಗೆ ಪ್ರಮೋದ್ ಮುತಾಲಿಕ್ ಅವರು ಮನವಿ ಮಾಡಿದರು.
"ಕೇರಳ ಕಳ್ಳತನದಿಂದ ಚಿನ್ನ ಸರಬರಾಜು ಆಗುವ ಅತೀ ದೊಡ್ಡ ಕೇಂದ್ರ"
"ದುಬೈನಿಂದ ಅಕ್ರಮ ಸಾಗಾಟದಿಂದ ಬರುವ ಚಿನ್ನವನ್ನು ಕೇರಳಕ್ಕೆ ಸಾಗಾಟವಾಗುತ್ತಿದ್ದು, ಅಲ್ಲಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ. ಕೇರಳ ಕಳ್ಳತನದಿಂದ ಚಿನ್ನ ಸರಬರಾಜು ಆಗುವ ಅತೀ ದೊಡ್ಡ ಕೇಂದ್ರ. ಕಳ್ಳತನದಿಂದ ಬರುವ ಚಿನ್ನದ ಮಾಫಿಯಾ ಹಿಂದೂ ಸಮಾಜಕ್ಕೆ ವ್ಯವಸ್ಥಿತವಾಗಿ ಮೋಸ ಮಾಡುತ್ತಿದೆ. ಆದ್ದರಿಂದ ಮಹಿಳೆಯರು, ಮಹಿಳಾ ಸಂಘಟನೆ ಇದನ್ನು ಗಮನಿಸಬೇಕಾಗಿದೆ ಎಂದು ಹೇಳಿದರು. ಕೇರಳದಲ್ಲಿ 800 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಹಿಂದೂ ಸಿದ್ಧಾಂತ ಹೊಂದಿರುವ, ದೇಶಭಕ್ತಿಯ ಕಾರ್ಯ ಎಸಗಿರುವ ಯುವಕರು ಇಲ್ಲಿ ಕೊಲೆಯಾಗಿದ್ದಾರೆ. ಈ ಕೊಲೆಗಡುಕರಿಗೆ, ಈ ಮುಸ್ಲಿಂ ಕಿಡಿಗೇಡಿ ಜಾಲಕ್ಕೆ ಅಕ್ರಮ ಸಾಗಾಟದ ಚಿನ್ನದ ವ್ಯವಹಾರದಿಂದ ಬರುವ ಹಣ ಹೋಗುತ್ತಿದೆ," ಎಂದು ತಿಳಿಸಿದರು.
"ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ರಾಜ್ಯದಿಂದ ನಿರಂತರವಾಗಿ ಗೋವುಗಳು, ಗೋಮಾಂಸ ನಿರಂತರವಾಗಿ ಸಾಗಾಟ ಮಾಡಲಾಗುತ್ತಿದೆ. ಕೇರಳದಿಂದ ವಿದೇಶಕ್ಕೂ ಗೋಮಾಂಸ ರಫ್ತು ಆಗುತ್ತಿದೆ. ಈ ಎಲ್ಲಾ ಕಾರ್ಯಗಳಿಗೆ ಕಳ್ಳ ದಂಧೆಯ ಚಿನ್ನದ ವ್ಯಾಪಾರಿಗಳು ನೆರವು ನೀಡುತ್ತಿದ್ದಾರೆ. ಕೇರಳ ಒಂದರಲ್ಲೇ 12 ಸಾವಿರಕ್ಕೂ ಅಧಿಕ ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಲಾಗಿದೆ. ಈ ಯುವತಿಯರನ್ನು ದುಬೈ, ಅರಬ್ ರಾಷ್ಟ್ರಗಳಿಗೆ ಮಾರಾಟ ಮಾಡಿದ್ದೂ ಇದೆ. ಇಂತಹ ದುಷ್ಕೃತ್ಯಗಳಿಗೆ ಚಿನ್ನದ ವ್ಯಾಪಾರಿಗಳು ಪರ್ಯಾಯವಾಗಿ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ಮಹಿಳೆಯರು ಹಿಂದೂ ಚಿನ್ನದಂಗಡಿಯಲ್ಲಿಯೇ ಚಿನ್ನ ಖರೀದಿಸಬೇಕು," ಎಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.












Click it and Unblock the Notifications